ಸಾರಾಂಶ
ದೀಡ್ ನಮಸ್ಕಾರ ಹಾಕಿ ಭಕ್ತಿ ಸಮರ್ಪಣೆ । ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರುಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಮಠದಲ್ಲಿ ಬುಧವಾರ ಬೆಳಗ್ಗೆಯಿಂದಲೇ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಗವಿಸಿದ್ಧೇಶ್ವರರ ಗದ್ದುಗೆ ದರ್ಶನ ಪಡೆದರು.ಗವಿಸಿದ್ಧೇಶ್ವರ ಕತೃ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗರ್ಭಗುಡಿಯ ಸುತ್ತಲೂ ವಿಶೇಷ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅಪಾರ ಪ್ರಮಾಣದ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಗದ್ದುಗೆ ದರ್ಶನ ಪಡೆದರು.
ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸರದಿಯಲ್ಲಿ ನಿಂತು ಗದ್ದುಗೆ ದರ್ಶನ ಪಡೆದರು. ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗವಿಸಿದ್ಧೇಶ್ವರ ಅಜ್ಜ ಜೀವಂತ ಸಮಾಧಿಯಾದ ಈ ದಿನ ರಥೋತ್ಸವ ಜರುಗುತ್ತಿದ್ದು, ಗವಿಸಿದ್ಧೇಶ್ವರ ಗದ್ದುಗೆ ಗೆ ಬೆಳಗ್ಗೆಯಿಂದ ಪೂಜಾ ಜರುಗಿತು.ಗವಿಸಿದ್ಧೇಶ್ವರ ದರ್ಶನಕ್ಕೆ ಬೆಳಗ್ಗೆ ಮಡಿಯಿಂದ ಆಗಮಿಸಿದ ಭಕ್ತರು ಅಜ್ಜನ ರಥೋತ್ಸವ ಪ್ರಯುಕ್ತ ನೈವೇದ್ಯ ಸಮರ್ಪಿಸಿದರು. ಕೆಲವು ಭಕ್ತರು ಸೂರ್ಯೋದಯಕ್ಕೂ ಮುನ್ನವೇ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮಹಿಳೆಯರು, ಪುರುಷರು, ಮಕ್ಕಳು ದೀಡ್ ನಮಸ್ಕಾರ ಹಾಕಿದರು.
ಅಭಿನವ ಗವಿಸಿದ್ಧೇಶ್ವರ ಆಶೀರ್ವಾದ:ಗದ್ದುಗೆ ದರ್ಶನ ಪಡೆದ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಭಿನವ ಗವಿಸಿದ್ಧೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳ ಪಾದಕ್ಕೆ ನಮಸ್ಕರಿಸಿ, ಅವರಿಂದ ಕಲ್ಸಕ್ಕರೆ ಪಡೆದರು. ಶ್ರೀಗಳು ಭಕ್ತರನ್ನು ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿ ಆಶೀರ್ವದಿಸಿದರು.
ಪಾದಯಾತ್ರೆ ಮೂಲಕ ಬಂದ ಭಕ್ತರು:ಗವಿಸಿದ್ಧೇಶ್ವರ ರಥೋತ್ಸವ ದಿನದಂದು ಅಪಾರ ಪ್ರಮಾಣದಲ್ಲಿ ಭಕ್ತರು ನಾನಾ ಗ್ರಾಮ ಹಾಗೂ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಕೊಪ್ಪಳದ ಗವಿಮಠಕ್ಕೆ ಆಗಮಿಸಿದರು. ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತವೃಂದಕ್ಕೆ ದಾರಿಯಲ್ಲಿ ಗವಿಸಿದ್ಧೇಶ್ವರ ಭಕ್ತರು ಚಾ, ಬಿಸ್ಕೇಟ್, ಪಾನಕ, ಲಘು ಉಪಾಹಾರ ಹೀಗೆ ವಿವಿಧ ಸೇವೆ ಸಲ್ಲಿಸಿದರು.