ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

| Published : May 05 2024, 02:00 AM IST

ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರೇ ನರಕಯಾತನೆ ಅನುಭವಿಸುತ್ತಿರುವಾಗ ಮೂಕ ಪ್ರಾಣಿಗಳ ಗತಿಯೇನು ಎಂಬುದನ್ನು ಅರಿತು ಕುಡಿಯುವ ನೀರಿನ ತೊಟ್ಟಿಗಳನ್ನು ಅಳವಡಿಸುತ್ತಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಸೈನಿಕ ಅಕಾಡೆಮಿ ವತಿಯಿಂದ ಶನಿವಾರ ಪ್ರಾಣಿ ಪಕ್ಷಿಗಳು, ಜಾನುವಾರುಗಳಿಗೆ ನೀರು ಕುಡಿಯುಲು ತೊಟ್ಟಿಗಳನ್ನು ಇಡಲಾಯಿತು.

ದನ, ಕರುಗಳು, ಕೋತಿ ಪ್ರಾಣಿ– ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವ ದೃಷ್ಟಿಯಿಂದ ತೊಟ್ಟಿಗಳನ್ನು ಅಳವಡಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರೇ ನರಕಯಾತನೆ ಅನುಭವಿಸುತ್ತಿರುವಾಗ ಮೂಕ ಪ್ರಾಣಿಗಳ ಗತಿಯೇನು ಎಂಬುದನ್ನು ಅರಿತು ಕುಡಿಯುವ ನೀರಿನ ತೊಟ್ಟಿಗಳನ್ನು ಅಳವಡಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಸ್ತುತ ದಿನಗಳಲ್ಲಿ ನಾನು, ನನ್ನದು ಎಂದು ಬಡಿದಾಡುವವರ ಮಧ್ಯೆ ಪ್ರಾಣಿ ಪಕ್ಷಿಗಳ ನೆರವಿಗೆ ಧಾವಿಸುತ್ತಿರುವ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರು ಹಾಗೂ ಮಾಜಿ ಕಮಾಂಡೋ ಸಿ.ಎಂ. ಶ್ರೀಧರ್ ಮಾತನಾಡಿ, ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ. ಅವುಗಳು ಆಹಾರಕ್ಕಾಗಿ ನಾಡಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅಭಿವೃದ್ಧಿಯ ನೆಪದಲ್ಲಿ ಪರಿಸರ ಸಂರಕ್ಷಣೆ ಕಡಿಮೆಯಾಗುತ್ತಿದೆ. ಹವಾಮಾನ ವೈಪರಿತ್ಯಕ್ಕೂ ಪರಿಸರ ಸಂರಕ್ಷಣೆಯ ವೈಫಲ್ಯವೂ ಕಾರಣವಾಗಿದೆ ಎಂದರು.

ಈ ವೇಳೆ ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಜೆಡಿಎಸ್ ನಗರ ಉಪಾಧ್ಯಕ್ಷ ಯದು ನಂದನ್, ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಬೈರತಿ ಲಿಂಗರಾಜು, ಸಮಾಜ ಸೇವಕಿ ಸವಿತಾ ಘಾಟ್ಕೆ, ನಾಗಶ್ರೀ ಸುಚಿಂದ್ರ, ಸೈನಿಕರು ಹಾಗೂ ಸೈನಿಕ ಅಕಾಡೆಮಿಯ ತರಬೇತಿ ಪಡೆಯುತ್ತಿರುವವರು ಇದ್ದರು.