ಸರ್ಕಾರಿ ಕಟ್ಟಡ, ಪಟ್ಟಾಭೂಮಿಯೂ ಈ ಪಟ್ಟಿಯಲ್ಲಿ ಸೇರಿದ್ದು, ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ಜಂಟಿ ಸರ್ವೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸುಪ್ರೀಂ ಕೋರ್ಟ್‌ಗೆ 2022ರಲ್ಲಿ ಸಲ್ಲಿಸುವ ಡೀಮ್ಡ್ ಅರಣ್ಯದ ಪ್ರಮಾಣಪತ್ರದಲ್ಲಿಯೂ ಸಾಕಷ್ಟು ಲೋಪದೋಷವಿದ್ದು, ಇದನ್ನು ಪರಿಹರಿಸಲು ನಡೆಸಲಾಗುತ್ತಿರುವ ಜಂಟಿ ಸಮೀಕ್ಷೆ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಕಟ್ಟಡ, ಪಟ್ಟಾಭೂಮಿಯೂ ಈ ಪಟ್ಟಿಯಲ್ಲಿ ಸೇರಿದ್ದು, ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ಜಂಟಿ ಸರ್ವೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.

ಸುಪ್ರೀಂ ಕೋರ್ಟ್ ಈ ಲೋಪ ದೋಷ ಪರಿಹರಿಸಲು ಅವಕಾಶ ನೀಡಿದ್ದು, ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಹಾಗೂ ವಿಭಾಗೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸೆಕ್ಷನ್ 4 ಶೀಘ್ರ ಇತ್ಯರ್ಥ, ಒತ್ತುವರಿ ತೆರವಿಗೆ ಸೂಚನೆ:

ಸೆಕ್ಷನ್ 4 ಆಗಿರುವ ಭೂಮಿಯಲ್ಲಿನ ಸಮಸ್ಯೆಯನ್ನೂ ಬೇಗ ಬಗೆಹರಿಸಿ, ಸೆಕ್ಷನ್ 17 ಮಾಡಲು ಕ್ರಮ ವಹಿಸುವಂತೆಯೂ ಸೂಚಿಸಲಾಗಿದೆ. ಅದೇ ರೀತಿ 2015ರ ನಂತರ ಆಗಿರುವ ಅರಣ್ಯ ಒತ್ತುವರಿ ಮತ್ತು 2015ರ ಪೂರ್ವದಲ್ಲಿ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿ ಆಗಿದ್ದಲ್ಲಿ ಅದ್ಯತೆಯ ಮೇಲೆ ತೆರವು ಮಾಡಲು ಸೂಚಿಸಲಾಗಿದೆ ಎಂದರು.

ಹಸಿರು ಹೊದಿಕೆ ಹೆಚ್ಚಿಸಲು ನಿರ್ದೇಶನ:

ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹದ್ದಾರಿ, ಜಿಲ್ಲಾ ಮುಖ್ಯರಸ್ತೆ, ಗ್ರಾಮೀಣ ರಸ್ತೆ ಸೇರಿ ಅಂದಾಜು 4 ಸಾವಿರ ಕಿ.ಲೋ ಮೀಟರ್ ರಸ್ತೆ ಇದ್ದು ರಸ್ತೆಯ ಎರಡೂ ಬದಿ ಎತ್ತರದ ಸಸಿಗಳನ್ನು ನೆಟ್ಟು ಪೋಷಿಸಿ ಹಸಿರುಹೊದಿಕೆ ಹೆಚ್ಚಿಸಲು ಸೂಚಿಸಲಾಗಿದೆ ಎಂದರು.

ಅಕ್ರಮ ಕಲ್ಲುಗಣಿಗಾರಿಕೆ ನಿಗ್ರಹಕ್ಕೆ ನಿರ್ದೇಶನ:

ಅರಣ್ಯ ಭೂಮಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೆ ಪರಿಶೀಲನೆ ನಡೆಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಸ್ಕಂದಗಿರಿ ಅಕ್ರಮದ ವಿರುದ್ಧ ಕ್ರಮ:

ಸ್ಕಂದಗಿರಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಮತ್ತು ಇಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ನಿಯಮ ಪಾಲಿಸಲು ಕಟ್ಟೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಮಾಲಿನ್ಯ ತಡೆಗೆ ಕ್ರಿಮಿನಲ್ ಮೊಕದ್ದಮೆಗೆ ಸೂಚನೆ:

ಸಂಸ್ಕರಣೆ ಮಾಡದ ತ್ಯಾಜ್ಯ ಜಲವನ್ನು ನದಿ, ಕೆರೆ ಸೇರಿದಂತೆ ಜಲ ಮೂಲಗಳಿಗೆ ಹರಿಸುತ್ತಿದ್ದರೆ, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ ಕ್ರಮವಹಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಆಗದಂತೆ ನಿಯಮಿತವಾಗಿ ಪರೀಕ್ಷೆ ನಡೆಸಿ ಕ್ರಮ ಜರುಗಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಸಭೆ ಆರಂಭಕ್ಕೂ ಮುನ್ನಾ ಸಚಿವ ಈಶ್ವರ್ ಖಂಡ್ರೆ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟರು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಆರ್‌ಎಫ್‌ಒ ಅಜೇಯ್, ಗೀತಾ, ರೆಗ್ಯುಲರ್ ಫಾರೆಸ್ಟ್ ಅಧಿಕಾರಿಗಳು, ಸೋಶಿಯಲ್ ಫಾರೆಸ್ಟ್ ಅಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು ಇದ್ದರು.

ಸಿಕೆಬಿ-4 ಸಚಿವ ಈಶ್ವರ್ ಖಂಡ್ರೆ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟರು