ಪಹಲ್ಗಾಮ್‌ ಉಗ್ರರ ದಾಳಿಗೆ ತೀವ್ರ ಆಕ್ರೋಶ

| Published : Apr 24 2025, 12:02 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೆಳಗಾವಿಯಲ್ಲಿ ಬುಧವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅಲ್ಲದೆ, ಉಗ್ರರ ದಾಳಿಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಬಿವಿಪಿ, ಶ್ರೀರಾಮ ಸೇನೆ, ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಹಾಗೂ ಬೆಳಗಾವಿ ವಕೀಲರ ಸಂಘ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೆಳಗಾವಿಯಲ್ಲಿ ಬುಧವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅಲ್ಲದೆ, ಉಗ್ರರ ದಾಳಿಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಬಿವಿಪಿ, ಶ್ರೀರಾಮ ಸೇನೆ, ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಹಾಗೂ ಬೆಳಗಾವಿ ವಕೀಲರ ಸಂಘ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದರು. ನಂತರ ಉಗ್ರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಹೇಡಿತನದ ಗುಂಡಿನ ದಾಳಿ ನಡೆಸಿರುವುದು ತೀವ್ರ ಖಂಡನೀಯ ಎಂದು ಕಿಡಿಕಾರಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ. ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ, ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದೆ.

ಆದರೂ ಅಲ್ಲಿನ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಮಾರುಕಟ್ಟೆಗಳಲ್ಲಿ ದಾಳಿಗಳು ಹಾಗೂ ಇಂದು ನಡೆದಿರುವ ಪ್ರವಾಸಿಗರ ಮೇಲಿನ ದಾಳಿ ಗಮನಿಸಿದರೆ ಕಾಶ್ಮೀರದ ಶಾಂತಿ ಮತ್ತು ಭಾರತದ ಏಕತೆಗೆ ಉಗ್ರರು ತೀವ್ರ ಸವಾಲು ಒಡ್ಡುತ್ತಿರುವುದು ಕಳವಳಕಾರಿಯಾಗಿದೆ. ಕೇಂದ್ರ ಸರ್ಕಾರವು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಎಬಿವಿಪಿ ನಗರ ಕಾರ್ಯದರ್ಶಿ ರೋಹಿತ ಆಲಕುಂಟೆ, ಪ್ರಶಾಂತ ಶೆಲ್ಲಿಕೇರಿ ಮೊದಲಾದವರು ಪಾಲ್ಗೊಂಡಿದ್ದರು. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆ ಸಂಚಾಲಕ ಕಿರಣ ಗಾವಡೆ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಹಿಂದು ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಉಗ್ರರ ದಾಳಿಗೆ ಬಲಿಯಾದ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ವಕೀಲರಿಂದ ಪ್ರತಿಭಟನೆ:

ಜಮ್ಮು-ಕಾಶ್ಮೀರದಲ್ಲಿ ಹಿಂದು ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವ ದುಷ್ಕೃತ್ಯವನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ಕಿವಡಸಣ್ಣವರ, ಬಸವರಾಜ ಮುಗಳಿ, ಶೀತಲ ರಾಮಶೆಟ್ಟಿ, ವಿಶ್ವನಾಥ ಸುಲ್ತಾನಪುರಿ, ಸುಮಿತಕುಮಾರ ಅಗಸಗಿ ಮೊದಲಾದವರು ಪಾಲ್ಗೊಂಡಿದ್ದರು. ಶ್ರೀರಾಮ ಸೇನೆ ಹಾಗೂ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ಮಾಡಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.