ಕಳಸ ತಾಲೂಕು ಕೇಂದ್ರಕ್ಕೆ ಮೂಲ ಸವಲತ್ತು ನೀಡಲು ದೀಪಕ್‌ ದೊಡ್ಡಯ್ಯ ಆಗ್ರಹ

| Published : Sep 10 2024, 01:35 AM IST

ಕಳಸ ತಾಲೂಕು ಕೇಂದ್ರಕ್ಕೆ ಮೂಲ ಸವಲತ್ತು ನೀಡಲು ದೀಪಕ್‌ ದೊಡ್ಡಯ್ಯ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಳಸ ತಾಲೂಕು ಕೇಂದ್ರಕ್ಕೆ ಸಲ್ಲಬೇಕಾದ ಮೂಲ ಸವಲತ್ತು ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಪಕ್ಷ ನಿವಾಸಿ ಗಳ ಜೊತೆಗೂಡಿ ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಎಚ್ಚರಿಸಿದರು.

ವಿಳಂಬ ನೀತಿ ಅನುಸರಿಸಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳಸ ತಾಲೂಕು ಕೇಂದ್ರಕ್ಕೆ ಸಲ್ಲಬೇಕಾದ ಮೂಲ ಸವಲತ್ತು ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಪಕ್ಷ ನಿವಾಸಿ ಗಳ ಜೊತೆಗೂಡಿ ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಎಚ್ಚರಿಸಿದರು.

ಕಳಸ ತಾಲೂಕು ಘೋಷಣೆ ಮುನ್ನ ಬಿಜೆಪಿ ಸಭೆ, ಪ್ರತಿಭಟನೆ ಬಳಿಕ ನಾಲ್ಕು ದಿನಗಳ ಕಾಲ ಸಾವಿರಾರು ಮಂದಿ ಜೊತೆಗೆ ಕಾಲ್ನಡಿಗೆ ಜಾಥಾ ನಡೆಸಿದ ಪರಿಣಾಮ ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದೀಗ ಕೇವಲ ನಾಮಕಾವಸ್ಥೆಗೆ ಮಾತ್ರ ತಾಲೂಕು ಕೇಂದ್ರವಾಗಿದೆ. ಹಳೆ ನಾಡ ಕಚೇರಿಯನ್ನು ತಾಲೂಕು ಕಚೇರಿಯನ್ನಾಗಿ ಮಾರ್ಪಾಡಿಸಿದೆ ಹೊರತು ಇಂದಿಗೂ ಅನಾಥ ತಾಲೂಕಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿರುವ ಕಾರಣ ಯಾವುದೇ ಸವಲತ್ತು ದೊರೆಯದಂತಾಗಿದೆ ಎಂದರು.

ಕಳಸ ತಾಲ್ಲೂಕು ಕಚೇರಿಗೆ ಎರಡ್ಮೂರು ವರ್ಷಗಳಿಂದ ಏಳೆಂಟು ತಹಸೀಲ್ದಾರ್‌ಗಳು ಕೇವಲ 3-4 ತಿಂಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸಿ ತೆರಳುವ ಸ್ಥಿತಿಯಿದೆ. ಒಂದು ರೀತಿ ಅನುಭವದ ಕೊರತೆ ಹಾಗೂ ಸ್ಥಳೀಯ ಜನರ ಸಮಸ್ಯೆ ಅರ್ಥ ವಾಗುವ ಮುನ್ನವೇ ವರ್ಗಾವಣೆಯಾಗುತ್ತಿದ್ದಾರೆ ಎಂದು ಹೇಳಿದರು.

ಸ್ಥಳೀಯ ಜನತೆ ಸಣ್ಣಪುಟ್ಟ ಸಮಸ್ಯೆಗೆ ಕಳಸ ಕಚೇರಿಗೆ ವಿಚಾರಿಸಿದರೆ ಮೂಡಿಗೆರೆ ತಾಲೂಕು ಕಚೇರಿಗೆ ತೆರಳಿ ಎನ್ನುವ ಉತ್ತರವಿದೆ. ಮೂಡಿಗೆರೆಯಲ್ಲಿ ವಿಚಾರಿಸಿದರೆ ಕಳಸದಲ್ಲೇ ಎಲ್ಲವೂ ಇದೆ ಎನ್ನುವ ಉಡಾಫೆ ಉತ್ತರ ನೀಡುತ್ತಿರುವ ಪರಿಣಾಮ ಕಳಸ ವ್ಯಾಪ್ತಿ ಜನತೆಗೆ ಸಮಯ ವ್ಯರ್ಥ ಹಾಗೂ ಹಣಕಾಸಿನ ಖರ್ಚು ಹೆಚ್ಚುತ್ತಿದೆ ಎಂದರು.

ಕಳಸದಲ್ಲಿ ತಾಲೂಕು ಮಟ್ಟದ ಕಚೇರಿ, ತಾಪಂ, ನ್ಯಾಯಾಲಯ, ಆಸ್ಪತ್ರೆ, ಸಬ್ ರಿಜಿಸ್ಟರ್ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಲಭ್ಯವಿಲ್ಲ. ಓರ್ವ ತಹಸೀಲ್ದಾರ್, ಕೆಲವೇ ಸಿಬ್ಬಂದಿ ಇದ್ದಾರೆ. ಈಚೆಗೆ ತಾಲೂಕು ಕಚೇರಿ ಉದ್ಘಾಟಿಸಿರುವ ಶಾಸಕರು, ಮೂಡಿಗೆರೆ ಇಒ ಅವರನ್ನೇ ಎರಡು ಕಡೆ ಕರ್ತವ್ಯಕ್ಕೆ ಸೂಚಿಸಿದ್ದು ಕಳಸಕ್ಕೆ ವಾರಕ್ಕೊಮ್ಮೆ ಬಂದು ಹೋಗುವ ಸ್ಥಿತಿಯಿದೆ ಎಂದು ಹೇಳಿದರು.

ಅರಣ್ಯ ಇಲಾಖೆ ಜಾಗವನ್ನು ಬಡ ವರ್ಗದ ಜನತೆಗೆ ಜೀವನ ಸುಧಾರಣೆಗೆ ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಹಾಗೂ ಬೆಳೆಗೆ ಕೈಸಾಲ ಮಾಡಿಕೊಂಡಿದ್ದಾರೆ. ಈ ಭೂಮಿ ಹೊರತುಪಡಿಸಿದರೆ ಬೇರ್ಯಾವ ಉದ್ಯೋಗವಿಲ್ಲದ ಅವರಿಗೆ ಏಕಾಏಕಿ ತೆರವುಗೊಳಿಸುವ ಆದೇಶ ಸರಿಯಲ್ಲ ಎಂದರು.

ಅರಣ್ಯ ಜಾಗದಲ್ಲಿ ಸಾಗುವಳಿ ಮಾಡಿಕೊಂಡಿರುವವರ ತೆರವಿಗೆ ದಿಢೀರನೇ ಮುಂದಾದರೆ ನಿರುದ್ಯೋಗ ಸಮಸ್ಯೆ ತಾಂಡವ ವಾಡಲಿದೆ. ಹೀಗಾಗಿ ಕಾಯ್ದೆ ಪರಿಶೀಲಿಸುವ ಜೊತೆಗೆ ಜೀವನ ಭದ್ರತೆಗೆ ಅರಿತು ಹಾಗೂ ಆಸರೆ ಒದಗಿಸಲು ಮುಂದಾದರೆ ಫಲಪ್ರದವಾಗಲಿದೆ ಎಂದರು.

ರಾಜ್ಯದ ಮುಖ್ಯಮಂತ್ರಿ ಮುಡಾ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡದೇ ತಪ್ಪಿಸಿಕೊಳ್ಳುವಲ್ಲಿ ಮುಂದಾಗಿದೆ. ಖುದ್ದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಹೊರತುಪಡಿಸಿ ಬೇರ್ಯಾವ ವ್ಯಕ್ತಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂಬ ಉದ್ದೇಶದಿಂದ ರಾಜಕೀಯ ದೊಂಬರಾಟದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರಪ್ಪ, ದಿನೇಶ್ ಇದ್ದರು. 9 ಕೆಸಿಕೆಎಂ 1