ಕಣ್ಣು ಕಾಣದಿದ್ದರೂ ಮನಸ್ಸಿನ ದೃಷ್ಟಿಯಿಂದ ಎತ್ತರಕ್ಕೇರಬಹುದು ಎಂಬುದನ್ನು ದೀಪಿಕಾ ಮತ್ತು ಸಂಪೂರ್ಣ ಭಾರತೀಯ ತಂಡ ತಮ್ಮ ಪ್ರದರ್ಶನದಿಂದ ಜಗತ್ತಿಗೆ ತೋರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಾ ಕಣ್ಣು ಕಾಣದಿದ್ದರೂ ಮನಸ್ಸಿನ ದೃಷ್ಟಿಯಿಂದ ಎತ್ತರಕ್ಕೇರಬಹುದು ಎಂಬುದನ್ನು ದೀಪಿಕಾ ಮತ್ತು ಸಂಪೂರ್ಣ ಭಾರತೀಯ ತಂಡ ತಮ್ಮ ಪ್ರದರ್ಶನದಿಂದ ಜಗತ್ತಿಗೆ ತೋರಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ತೋರಿದ ಅವರ ಶಿಸ್ತಿನ ಆಟ, ತಂಡಸ್ಪೂರ್ತಿ, ಸಾಹಸ ಮತ್ತು ಅಚಲವಾದ ಆತ್ಮವಿಶ್ವಾಸ ಇವೆಲ್ಲವೂ ದೇಶದ ಪ್ರತಿಯೊಬ್ಬ ನಾಗರಿಕನ ಮನದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು. ಅವರು ಅಂಧ ಮಹಿಳೆಯರ ಟಿ೨೦ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಶಿರಾ ತಾಲೂಕಿನ ಕರೆತಿಮ್ಮನಹಳ್ಳಿ ಗ್ರಾಮದ ಭಾರತ ತಂಡದ ನಾಯಕಿ ದೀಪಿಕಾ ಅವರನ್ನು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ, ಶುಭ ಹಾರೈಸಿ ಮಾತನಾಡಿದರು. ಭಾರತೀಯ ದೃಷ್ಟಿಹೀನ ಮಹಿಳಾ ಕ್ರಿಕೆಟ್ ತಂಡವು ವಿಶ್ವ ವೇದಿಕೆಯಲ್ಲಿ ಸಾಧಿಸಿದ ಅಪ್ರತಿಮ ಜಯ ನಮ್ಮ ದೇಶದ ಗೌರವವನ್ನು ಮತ್ತೊಮ್ಮೆ ವಿಶ್ವದ ನಕ್ಷೆಯಲ್ಲಿ ಬೇರೊಂದು ಎತ್ತರಕ್ಕೆ ಎತ್ತಿದೆ. ವಿಶೇಷವಾಗಿ ಶಿರಾ ತಾಲೂಕಿನ ಪ್ರತಿಭೆ, ತಂಡದ ನಾಯಕಿ ಕುಮಾರಿ ದೀಪಿಕಾ ಅವರ ಅದ್ಭುತ ನಾಯಕತ್ವ, ಧೈರ್ಯ ಮತ್ತು ಅಸಮರ್ಪಿತ ಹೋರಾಟವು ಈ ಐತಿಹಾಸಿಕ ವಿಜಯಕ್ಕೆ ಪ್ರಮುಖ ಶಕ್ತಿ ಆಗಿದೆ. ದೃಷ್ಟಿಹೀನ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗುವುದು ಕೇವಲ ಕ್ರಿಕೆಟ್ ಸಾಧನೆ ಮಾತ್ರವಲ್ಲ, ಇದು ಮಹಿಳಾ ಶಕ್ತಿ, ಮಾನಸಿಕ ಬಲ ಮತ್ತು ಮಾನವೀಯ ಸಾಮರ್ಥ್ಯದ ವಿಜಯ. ಕುಮಾರಿ ದೀಪಿಕಾ ಅವರ ಜನ್ಮಭೂಮಿ ಶಿರಾಕ್ಕೆ ಇದು ವಿಶೇಷ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ನಗರಸಭೆ ಸದಸ್ಯ ಸ್ವಾತಿ ಮಂಜೇಶ್, ಮಾಜಿ ಸುಡಾ ಅಧ್ಯಕ್ಷ ಮಾರುತೇಶ್, ವಿಜಯರಾಜ್, ಗೌಡ ಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರ್, ಶ್ರೀನಿವಾಸ್, ಸತ್ಯ ಭಾಮಾ, ಅಪ್ಪಿ ರಂಗನಾಥ್, ಶಿವು, ದೊಡ್ಡಿರಪ್ಪ, ಮದು, ಈರಣ್ಣ, ಸತೀಶ್, ದೇವರಾಜ್, ದಾಸರಹಳ್ಳಿ ರಾಜಣ್ಣ, ಹನುಮಂತೆ ಗೌಡ, ಕಿರಣ್, ಸೂರ್ಯ ಗೌಡ, ಕೊಟ್ಟ ರಂಗನಾಥ್, ಶೇಖರ್, ದೇವರಾಜ್ ಸೇರಿದಂತೆ ಹಲವರು ಹಾಜರಿದ್ದರು.