ಸಾರಾಂಶ
ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾಫಿ ತೋಟದಲ್ಲಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾರೆ.ಕುಶಾಲನಗರ ಅರಣ್ಯ ವಲಯದ ಅತ್ತೂರು ನಲ್ಲೂರು ಗ್ರಾಮದ ಕಾಫಿ ತೋಟದಲ್ಲಿ ಜಿಂಕೆಗಳನ್ನು ಬೇಟೆಯಾಡಿದ್ದು ಈ ಸಂಬಂಧ ಆರೋಪಿಗಳಾದ ಸಿದ್ದಾಪುರ ನಿವಾಸಿ ಸುನಿಲ್ , ನಾಪೋಕ್ಲು ಕೊಳಕೇರಿ ಗ್ರಾಮದ ನಿವಾಸಿ ಕೆ ಡಿ ಮುತ್ತಣ್ಣ ಎಂಬವರನ್ನು ಬಂಧಿಸಲಾಗಿದೆ.
ಕಕ್ಕಬೆ ಗ್ರಾಮದ ಎ ಎನ್ ಶ್ಯಾಮ್ ಎಂಬಾತ ತಲೆಮರೆಸಿಕೊಂಡಿದ್ದು ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಕಾಫಿ ತೋಟದಲ್ಲಿ ಜಿಂಕೆಗಳನ್ನು ಬೇಟೆಯಾಡಿ ಜಿಂಕೆಗಳ ಚರ್ಮ ತಲೆ ಕಾಲು ಹಾಗೂ ಹೊಟ್ಟೆಯ ಭಾಗಗಳನ್ನು ತೋಟದಲ್ಲಿ ಹೂತಿಟ್ಟಿದ್ದನ್ನು ಪತ್ತೆ ಹಚ್ಚಿ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಸಾರ ಮೊಕದ್ದಮೆ ದಾಖಲಿಸಲಾಗಿದೆ ಎಂದು ರತನ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.