ಸಾರಾಂಶ
ಯಲ್ಲಾಪುರ: ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಜಿಂಕೆ ಬೇಟೆ ಆರೋಪದ ಮೇರೆಗೆ ಆರು ಜನರನ್ನು ಬಂಧಿಸಿ, ಬೇಟೆಗೆ ಬಳಸಿದ ಬಂದೂಕು, ಎರಡು ಕಾರು ಹಾಗೂ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದಾರೆ.
ಉದ್ಯಮ ನಗರದ ರುಸ್ತುಂ ಅಟೇಲಸಾಬ ಬೇಪಾರಿ, ಶಬ್ಬೀರ ರುಸ್ತಂ ಶೇಖ ಬೇಫಾರಿ, ಕಾಳಮ್ಮನಗರದ ಮಹಮ್ಮದ ರಫೀಕ ಇಮಾಮಸಾಬ ಯಳ್ಳೂರ, ಕರೀಂ ಖಾದರಸಾಬ ಶೇಖ, ಮಹಮ್ಮದ ಶಫಿ ಖಾದರಸಾಬ ಶೇಖ, ಚಂದಗುಳಿ ಗ್ರಾಮದ ಜನಕಲಜಡ್ಡಿಯ ಸತೀಶ ಪರಮೇಶ್ವರ ನಾಯ್ಕ ಹಾಗೂ ಉದ್ಯಮನಗರದ ಪ್ರಶಾಂತ ಮಂಜುನಾಥ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ.ಘಟನೆಯ ವಿವರ: ಮಾಹಿತಿಯ ಮೇರೆಗೆ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ ಜನಕಲಜಡ್ಡಿ ಸತೀಶ ಪರಮೇಶ್ವರ ನಾಯ್ಕ ಅವರ ಮನೆಯನ್ನು ಶನಿವಾರ ಬೆಳಗಿನ ಜಾವ ತಪಾಸಣೆ ಮಾಡಿದಾಗ ಜಿಂಕೆ ಮಾಂಸ ಹಾಗೂ ಅನಧಿಕೃತವಾದ ಬಂದೂಕು ಪತ್ತೆಯಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಲ್ಲಾಪುರ ಪಟ್ಟಣದ ಉದ್ಯಮನಗರದ ನಿವಾಸಿ ರುಸ್ತುಂ ಅಟೇಲಸಾಬ ಬೇಪಾರಿ ಇನ್ನಿತರರನ್ನು ಪ್ರಚೋದನೆ ಮಾಡಿ ಬಳಸಿಕೊಂಡು ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುವ ದಂಧೆಯನ್ನು ತನ್ನ ವೃತ್ತಿಯನ್ನಾಗಿ ನಡೆಸಿಕೊಂಡು ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಗುರುವಾರ ರಾತ್ರಿ ಯಲ್ಲಾಪುರ-ಹಳಿಯಾಳ ರಸ್ತೆಯ ಪಕ್ಕ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆಯೊಂದನ್ನು ಬೇಟೆಯಾಡಿ ಮಾಂಸವನ್ನು ಕಾರಿನಲ್ಲಿ ಸಾಗಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಪ್ರಶಾಂತ ಮಂಜುನಾಥ ನಾಯ್ಕ ಎಂಬ ಆರೋಪಿ ತಲೆಮರೆಸಿಕೊಂಡಿರುತ್ತಾನೆ. ಉಳಿದ 6 ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಂತೆ ಪ್ರಕರಣ ದಾಖಲಿಸಲಾಗಿದೆ.ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ.ಪಿ. ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ವಲಯದ ವಲಯ ಅರಣ್ಯಾಧಿಕಾರಿ ಎಲ್.ಎ. ಮಠ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಅಲ್ತಾಫ್, ಶ್ರೀನಿವಾಸ, ಸಂತೋಷ, ಬಸಲಿಂಗಪ್ಪ, ಅಶೋಕ, ಸಂಜಯಕುಮಾರ, ಶರಣಬಸು, ಗಸ್ತು ಅರಣ್ಯಪಾಲಕರಾದ ದೇವರಾಜ, ಅಲ್ಮಾಸ್, ಗೌರೀಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.