ಜಿಂಕೆ ರಕ್ಷಿಸಿದ ಅರಣ್ಯ ಇಲಾಖೆಯ ಇಟಿಎಫ್

| Published : Jul 16 2024, 12:33 AM IST

ಸಾರಾಂಶ

ಹನೂರು ದೊಡ್ಡ ಮಾಲಾಪುರ ಗ್ರಾಮದ ರೈತ ಶಿವಸ್ವಾಮಿ ಜಮೀನಿನ ಬಾವಿಯಲ್ಲಿ ಬಿದ್ದಿದ್ದ ಜಿಂಕೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ವರ್ಗ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್ ವಲಯದ ದೊಡ್ಡ ಮಾಲಾಪುರ ಸಮೀಪದ ರೈತ ಶಿವಸ್ವಾಮಿ ಜಮೀನಿನಲ್ಲಿರುವ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಬಾವಿಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.ನಾಡಿಗೆ ಬಂದ ಜಿಂಕೆ: ಮಲೆ ಮಾದೇಶ್ವರ ವನ್ಯಧಾಮ ಡಿ ಲೈನ್ ಅರಣ್ಯ ಪ್ರದೇಶದಿಂದ ಗಂಡು ಜಿಂಕೆ ರೈತ ಶಿವ ಸ್ವಾಮಿ ಜಮೀನಿನ ಬಳಿ ಕಾಣಿಸಿಕೊಂಡಾಗ ನಾಯಿಗಳು ಜಿಂಕೆ ಹಿಡಿಯಲು ಓಡಿಸಿಕೊಂಡು ಹೋಗುತ್ತಿದ್ದಾಗ ಜಿಂಕೆ ತಪ್ಪಿಸಿಕೊಳ್ಳಲು ಹೋಗಿ ರೈತ ಶಿವಸ್ವಾಮಿ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿದೆ. ಜಮೀನಿನ ಮಾಲೀಕ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಗಸ್ತಿನಲ್ಲಿದ್ದ ಇಟಿಎಫ್ ಕ್ಯಾಂಪ್‌ ಸಿಬ್ಬಂದಿ ವರ್ಗದವರನ್ನು ಕಳುಹಿಸಿ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ಬಾವಿಯಿಂದ ಮೇಲೆತ್ತಿ ಗಾಯಗೊಂಡಿದ್ದ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ ವಲಯ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಲೆ ಮಾದೇಶ್ವರ ಒನ್ನೆ ಧಾಮದ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಜಿಂಕೆಯನ್ನು ಸಿಬ್ಬಂದಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಚ್ಚುಗೆ ವ್ಯಕ್ತಪಡಿಸಿದ ರೈತರು: ಸುಮಾರು 50ರಿಂದ 60 ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದ ಜಿಂಕೆಯನ್ನು ಇಟಿಎಫ್ ಕ್ಯಾಂಪ್‌ನ ಸಿಬ್ಬಂದಿ ಡಿಆರ್‌ಎಫ್ ನಂದೀಶ್, ಗಸ್ತು ಅರಣ್ಯಪಾಲಕ ಅನಿಲ್ ಕುಮಾರ್ ಮತ್ತು ಚಿನ್ನಸ್ವಾಮಿ ಹಾಗೂ ಇಟಿಎಫ್ ಅರಣ್ಯ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಜಿಂಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಸುರಕ್ಷಿತವಾಗಿ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.