ಜಗಜೀವನರಾಮ್‌, ಅಂಬೇಡ್ಕರ್‌ ಭಾವಚಿತ್ರಗಳಿಗೆ ಹೇಸಿಗೆ ಬಳಿದಿದ್ದು ಖಂಡನೀಯ

| Published : Nov 04 2024, 12:32 AM IST

ಸಾರಾಂಶ

ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಹೇಸಿಗೆ ಬಳಿದು ಅವಮಾನ ಮಾಡಿರುವುದನ್ನು ಖಂಡಿಸಿ ಶನಿವಾರ ದಲಿತಪರ ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ಬಂಧಿಸುವಂತೆ ಒತ್ತಾಯಿಸಿದ್ದಾರೆ.

- ಭೈರನಾಯಕನಹಳ್ಳಿಯಲ್ಲಿ ಕಿಡಿಗೇಡಿಗಳ ಕೃತ್ಯ ಖಂಡಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಹೇಸಿಗೆ ಬಳಿದು ಅವಮಾನ ಮಾಡಿರುವುದನ್ನು ಖಂಡಿಸಿ ಶನಿವಾರ ದಲಿತಪರ ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ಬಂಧಿಸುವಂತೆ ಒತ್ತಾಯಿಸಿದರು.

ಕಳೆದೆರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಮ್ ಯುವಕರ ಸಂಘದಿಂದ ಡಾ.ಬಾಬು ಜಗಜೀವನ್ ರಾಮ್, ಡಾ. ಬಿ.ಆರ್. ಅಂಬೇಡ್ಕರ್, ಬುದ್ದ, ಬಸವ ಅವರ ಭಾವಚಿತ್ರಗಳಿರುವ ನಾಮಫಲಕ ಅಳವಡಿಸಲಾಗಿತ್ತು. ಶುಕ್ರವಾರ ತಡರಾತ್ರಿ ಕೆಲವು ಕಿಡಿಗೇಡಿಗಳು ಈ ಮಹಾನ್ ನಾಯಕರ ಭಾವಚಿತ್ರಗಳಿಗೆ ಹೇಸಿಗೆ ಬಳಿದು, ಹರಿದುಹಾಕಿದ್ದಾರೆ. ಶನಿವಾರ ಮುಂಜಾನೆ ವಿಷಯ ತಿಳಿದ ದಲಿತಪರ ಸಂಘಟನೆಗಳು ಮುಖಂಡರು ಸ್ಥಳಕ್ಕೆ ಆಗಮಿಸಿ ನಾಮಫಲಕದ ಮುಂಭಾಗ ಧರಣಿ ಕುಳಿತು, ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗ ಸಮಾಜದ ತಾಲೂಕಾಧ್ಯಕ್ಷ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ಅತ್ಯಂತ ಬುದ್ಧಿಜೀವಿ, ಸಂಸದೀಯ ಪಟು, ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಬಗ್ಗೆ ಇಡೀ ದೇಶವೇ ಗುರುತಿಸಿದೆ. ಇಂತಹ ನಾಯಕರ ಭಾವಚಿತ್ರಕ್ಕೆ ಹೇಸಿಗೆ ಬಳಿದು ಅವಮಾನ ಮಾಡಿದ್ದಾರೆ. ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಲೆಮಾಚಿಕೆರೆ ಸತೀಶ್, ಉಪನ್ಯಾಸಕ ನಾಗಲಿಂಗಪ್ಪ ಮಾತನಾಡಿದರು. ಪ್ರತಿಭಟನೆ ವಿಷಯ ತಿಳಿದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪಿಐ ಶ್ರೀನಿವಾಸ ರಾವ್, ಪಿಡಿಒ ವಾಸುದೇವ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರ ಮನವಿ ಆಲಿಸಿದರು. ಇಂಥ ಘಟನೆ ಮರುಕಳಿಸದಂತೆ ತಾಲೂಕು ಆಡಳಿತ ಎಚ್ಚರಿಕೆ ವಹಿಸಲಿದೆ ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಭರವಸೆ ನೀಡಿದರು.

ದಸಂಸ ಸಂಚಾಲಕ ಕುಬೇಂದ್ರಪ್ಪ, ವಕೀಲ ಎಚ್.ಹನುಮಂತಪ್ಪ, ಸಂಘದ ಅಧ್ಯಕ್ಷ ಚೌಡಪ್ಪ, ಮುಖಂಡರಾದ ಗ್ಯಾಸ್ ಓಬಣ್ಣ, ಪಲ್ಲಾಗಟ್ಟೆ ರಂಗಪ್ಪ, ವ್ಯಾಸಗೊಂಡನಳ್ಳಿ ಪಾಂಡು, ಕೊರಟಿಕೆರೆ ನಾಗರಾಜ್, ಚಂದ್ರಪ್ಪ ಇತರರು ಇದ್ದರು.

- - - -03ಜೆ.ಜಿ.ಎಲ್.2:

ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ದಲಿತ ಕಾಲೋನಿಯಲ್ಲಿ ಶನಿವಾರ ಡಾ. ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಹೇಸಿಗೆ ಬಳಿದು ಅವಮಾನ ಮಾಡಿರುವ ತಪ್ಪಿಸ್ಥರನ್ನು ಪತ್ತೆಹಚ್ಚಿ, ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.