ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾಮಾಜಿಕ ಜಾಲತಾಣಗಳಲ್ಲಿ "ನನ್ನನ್ನು ರಾಗಿ ಕಳ್ಳ, ಮನೆಗಳ್ಳ " ಎಂದೆಲ್ಲಾ ಅಪಪ್ರಚಾರ ಮಾಡಿ ಮಾನಹಾನಿ ಮಾಡುತ್ತಿರುವ ಜೆಡಿಎಸ್ಸೂ ಅಲ್ಲದ, ಬಿಜೆಪಿಯೂ ಅಲ್ಲದ ಸ್ವಘೋಷಿತ ಮುಖಂಡ ಎನ್.ಆರ್. ಸಂತೋಷ್ ಮೇಲೆ ಹೈಕೋರ್ಟಲ್ಲಿ ಮಾನಹಾನಿ ಪ್ರಕರಣ ದಾಖಲಿಸುವುದು ಗ್ಯಾರಂಟಿ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್‌ಗೆ ಬೇರೆ ಕೆಲಸ ಇಲ್ಲ. ನೆಲೆ ಹುಡುಕಿಕೊಂಡು ಅರಸೀಕೆರೆ ಕ್ಷೇತ್ರಕ್ಕೆ ಬಂದಿರುವ ಈತ ಕ್ಷೇತ್ರದಲ್ಲಿ ಒಡಕು ಮೂಡಿಸುತ್ತಿದ್ದಾರೆ. ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ನಿರಾಧಾರ ಆರೋಪ ಮಾಡುವ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ನೆಲೆ ಅರಸಿಕೊಂಡು ಬಂದ ಈತನನ್ನು ಈವರೆಗೆ ಸಹಿಸಿಕೊಂಡಿದ್ದೆ. ಆದರೆ, ಈತನ ಕಿತಾಪತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈತ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾನೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಮೇಲೆ ಪರಿಣಾಮ ಉಂಟಾಗಲಿದೆ. ಈತನ ಉದ್ದೇಶ ಕೂಡ ಇದೇ ಆಗಿದ್ದು, ನನ್ನ ಮೇಲೆ ಸಲ್ಲದ ಆರೋಪ ಹೊರಿಸಿ ಆಮೂಲಕ ನನ್ನನ್ನು ನಿರುತ್ಸಾಹಿಯನ್ನಾಗಿ ಮಾಡಿ, ಕ್ಷೇತ್ರದ ಅಭಿವೃದ್ಧಿಯನ್ನು ಕುಂಠಿತ ಮಾಡುವುದೇ ಆಗಿದೆ. ಆದರೆ, ನನಗೂ ಕಾನೂನು ತಿಳಿದಿದೆ. ಸಲ್ಲದ ಆರೋಪ ಮಾಡುತ್ತಾ ಮಾನಹಾನಿ ಮಾಡಲು ಯತ್ನಿಸುವವರ ಮೇಲೆ ಯಾವ್ಯಾವ ಸೆಕ್ಷನ್ ಹಾಕಬೇಕು ಎನ್ನುವುದು ನನಗೂ ಗೊತ್ತಿದೆ. ಹಾಗಾಗಿ ಈ ಬಾರಿ ಆತನಿಗೆ ಬುದ್ಧಿ ಕಲಿಸುತ್ತೇನೆ. ಹೈಕೋರ್ಟಲ್ಲೇ ಮಾನಹಾನಿ ದೂರು ದಾಖಲಿಸುತ್ತೇನೆ ಎಂದು ಹೇಳಿದರು.
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ:ಆಶ್ರಯಮನೆ ವಿತರಣೆಯಲ್ಲಿ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಇದಕ್ಕೆ ಶಾಸಕ ಶಿವಲಿಂಗೇಗೌಡರೇ ಹೊಣೆ ಎಂದು ಸಂತೋಷ್ ಆರೋಪಿಸಿದ್ದಾರೆ. ಆದರೆ, ಈ ಹಗರಣ ಅವರಿಗೂ ಮುನ್ನ ನನ್ನ ಗಮನಕ್ಕೆ ಬಂದಿದ್ದು, ನಾನೇ ಮೊದಲು ಈ ಹಗರಣದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದೆ. ನಮ್ಮ ತಾಲೂಕು ಸೇರಿದಂತೆ ಹಲವು ಕಡೆ ಹಗರಣ ಆಗಿದೆ. ಸಂತೋಷ್ ಹೇಳುವಂತೆ ನಾನೇ ಹಗರಣ ಮಾಡಿದ್ದರೆ ನಾನೇಕೆ ತನಿಖೆಗೆ ಒತ್ತಾಯಿಸುತ್ತಿದ್ದೆ? ಒಂದುವೇಳೆ ಸಂತೋಷ್ ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದರು.
ನನ್ನ ಮೇಲೆ ವೈಯಕ್ತಿಕವಾಗಿ ಇಷ್ಟೆಲ್ಲಾ ಆರೋಪ ಮಾಡುವ ಈತನ ವೈಯಕ್ತಿಯ ಬದುಕಿನ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಈತ ಜೆಡಿಎಸ್ ಅಥವಾ ಬಿಜೆಪಿಯೋ ಎನ್ನುವುದೇ ಗೊಂದಲ. ಏಕೆಂದರೆ ಮೂಲತಃ ಬಿಜೆಪಿಯಲ್ಲಿದ್ದ ಈತ, ಅರಸೀಕೆರೆಗೆ ಬಂದರೆ ತಾನು ಜೆಡಿಎಸ್ ಎಂತಲೂ ದೆಹಲಿಗೆ ಹೋದರೆ ಯತ್ನಾಳ್ ಜತೆ ಸೇರಿಕೊಂಡು ಬಿಜೆಪಿ ಎಂದೂ ಹೇಳುತ್ತಾರೆ. ಇವರೆಲ್ಲಾ ಯಾವ ಪಕ್ಷದವರು ಎಂದು ಪ್ರಶ್ನಿಸಿದರು.ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಆಶ್ರಯಮನೆ ಹಗರಣದಲ್ಲಿ ನನ್ನ ಕೈವಾಡವಿದೆ ಎಂದು ಆರೋಪ ಮಾಡುವ ಈತನಿಗೆ ಇದು ಕೇಂದ್ರ ಸರ್ಕಾರದ ವಸತಿ ಯೋಜನೆ ಎನ್ನುವುದು ಗೊತ್ತಿಲ್ಲವೆ? ಇದರಲ್ಲಿ ನಾನಾಗಲಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ. ಎಲ್ಲಾ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಈ ಹಗರಣ ಮಾಡಿದ್ದೇನೆನ್ನುವ ಸಂತೋಷ್‌ಗೆ ಶಾಸಕರಿಗೆ ಬೇರೆ ಕೆಲಸ ಇದೆ ಎನ್ನುವುದು ಗೊತ್ತಿಲ್ಲವೆ. ಪಿಡಿಒಗಳಿಗೆ ಫೋನ್ ಮಾಡಿಕೊಂಡು ಕೂರಲಿಕ್ಕೆ ಆಗುತ್ತದಾ. ನಾವೇನಿದ್ದರೂ ಜಿಲ್ಲಾ ಪಂಚಾಯ್ತಿ ಸಿಇಒಗೆ ಫೋನ್ ಮಾಡಿ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದರು.
ಆಶ್ರಯ ಮನೆ ಯೋಜನೆ ಫಲಾನುಭವಿಗಳಿಗೆ ಅನುಮೋದನೆ ನೀಡುವುದು ತಾಲೂಕು ಪಂಚಾಯ್ತಿ ಇಒ ಹಾಗೂ ಜಿಲ್ಲಾ ಪಂಚಾಯ್ತಿಯಲ್ಲಿರುವ ಯೋಜನಾ ನಿರ್ದೇಶಕರು ಮತ್ತು ಮುಖ್ಯ ಲೆಕ್ಕಾಧಿಕಾರಿಗಳು. ಯಾವುದೇ ಗ್ರಾಮ ಪಂಚಾಯ್ತಿ ಪಿಡಿಒ ಅಥವಾ ಎಂಎಲ್ ಎ ಮಾಡೋದಲ್ಲ. ಇದು ಕೆಲ ಅಧಿಕಾರಿಗಳು ಮಾಡಿರುವ ಹಗರಣ. ನಮ್ಮ ತಾಲೂಕಿನ ಬಾಣಾವರ ಗ್ರಾಮ ಪಂಚಾಯ್ತಿಯ ನಕಲಿ ಫಲಾನುಭವಿಗೆ ಸಕಲೇಶಪುರ ತಾಲೂಕಿನ ಯಸಳೂರು ಭಾಗದ ಆಧಾರ್ ಕಾರ್ಡ್ ಹಾಕಿ ಹಣ ಲೂಟಿ ಆಗಿದೆ. ತಾಪಂ ರೊಓ ಮತ್ತು ಗ್ರಾಪಂ ಪಿಡಿಒಗಳು ಒಂದೇ ಲಾಗಿನ್‌ನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯ್ತಿಯಲ್ಲಿರುವ ಯೋಜನಾ ನಿರ್ದೇಶಕರಿಗೆ ಕಳುಹಿಸುತ್ತಾರೆ. ಅವರು ಕೂಡ ಲಾಗಿನ್‌ನಲ್ಲಿ ಓಕೆ ಮಾಡಿದಾಗ ಅದು ಜಿಲ್ಲಾ ಪಂಚಾಯ್ತಿ ಮುಖ್ಯಲೆಕ್ಕಾಧಿಕಾರಿಗೆ ಹೋಗಿ ಅವರು ಕೂಡ ಓಕೆ ಮಾಡಿದ ನಂತರ ಆಧಾರ್ ಕಾರ್ಡ್‌ನಲ್ಲಿರುವ ಫಲಾನುಭವಿ ಖಾತೆಗೆ ಹಣ ಹೋಗುತ್ತದೆ. ಇದು ಅಧಿಕಾರಿಗಳ ಮಟ್ಟದಲ್ಲಿ ಆಗಿರುವ ಹಗರಣ. ಹಾಗಾಗಿ ತನಿಖೆ ಆಗಬೇಕು. ಇದು ಜಿಲ್ಲೆಯಲ್ಲಿ ಭಾರೀ ದೊಡ್ಡ ಹಗರಣವಾಗಿದೆ. ಹಾಗಾಗಿ ಇದನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ತನಿಖೆಗೆ ಒತ್ತಾಯಿಸುತ್ತೇ. ಹಾಗೆಯೇ ನನ್ನ ಮೇಲೆ ಆಗಾಗ ಪೊಳ್ಳು ಆರೋಪ ಮಾಡುವ ಸಂತೋಷ್‌ಗೆ ಕೂಡ ತಕ್ಕ ಪಾಠ ಕಲಿಸುವುದಾಗಿ ಶಿವಲಿಂಗೇಗೌಡರು ಮತ್ತೊಮ್ಮೆ ಗುಡುಗಿದರು.