ಸೋಲು, ವೈಫಲ್ಯ ಕಲಿಸುತ್ತದೆ ಜೀವನ ಪಾಠ: ಶಾಸಕ ಶ್ರೀನಿವಾಸ ಮಾನೆ

| Published : Jun 18 2025, 11:48 PM IST

ಸಾರಾಂಶ

ನಮ್ಮ ಮುಂದಿನ ಭವಿಷ್ಯವನ್ನು ವಿದ್ಯಾರ್ಥಿ ಜೀವನವೇ ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಪ್ರತಿಕ್ಷಣವನ್ನೂ ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಹಾನಗಲ್ಲ: ಗೆಲುವು, ಯಶಸ್ಸಿನಲ್ಲಿ ಕಲಿಕೆ ಏನೂ ಇಲ್ಲ. ಆದರೆ ಸೋಲು, ವೈಫಲ್ಯ ಮಾತ್ರ ಸಾಕಷ್ಟು ಜೀವನಪಾಠ ಕಲಿಸುತ್ತದೆ. ಹಿನ್ನಡೆ ಆದರೆ ಆಲೋಚಿಸಲು ಆರಂಭಿಸುತ್ತೇವೆ. ಆಗ ಮಾತ್ರವೇ ನಮಗೆ ಯಶಸ್ಸಿನ ದಾರಿ, ಗೆಲುವಿನ ಮಂತ್ರ ಸಿಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ತಿಳವಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಮುಂದಿನ ಭವಿಷ್ಯವನ್ನು ವಿದ್ಯಾರ್ಥಿ ಜೀವನವೇ ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಪ್ರತಿಕ್ಷಣವನ್ನೂ ಸದ್ಬಳಕೆ ಮಾಡಿಕೊಳ್ಳಬೇಕಿದೆ. ತಂತ್ರಜ್ಞಾನವನ್ನು ಮನರಂಜನೆಗೆ ಮಾತ್ರ ಸೀಮಿತ ಮಾಡಿಕೊಳ್ಳದೇ ಅಧ್ಯಯನಕ್ಕೆ ಬಳಸಿಕೊಳ್ಳಬೇಕಿದೆ. ಜಗತ್ತಿನ ಆಗುಹೋಗುಗಳನ್ನು ಅರಿಯಬೇಕಿದೆ. ಜ್ಞಾನಾರ್ಜನೆ ಸರಿಯಾದರೆ ಉತ್ತಮ ಭವಿಷ್ಯ ಲಭಿಸಲಿದೆ. ಯಾವುದಕ್ಕೆ ಸಮಯ ಎಷ್ಟು ಕೊಡಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಸಮಯ ವ್ಯರ್ಥ ಮಾಡಿದರೆ ಸಾಧನೆ ಆಗದು. ನಿಶ್ಚಿತ ಗುರಿಯ ಕಡೆಗೆ ಮುನ್ನುಗ್ಗಿ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಉಪನ್ಯಾಸಕ ಡಾ. ವಿಶ್ವನಾಥ ಬೋಂದಾಡೆ ಮಾತನಾಡಿ, ಸಿಕ್ಕ ಅವಕಾಶ, ಸಮಯವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸುವುದು ಜಾಣತನ. ವಿದ್ಯಾರ್ಥಿಜೀವನದಲ್ಲಿ ಸಮಯಹರಣ ಮಾಡಿದರೆ ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಜಾಗತಿಕ ಪೈಪೋಟಿ ಹೆಚ್ಚಿರುವ ಈ ಸಂದರ್ಭದಲ್ಲಿ ಸಾಮರ್ಥ್ಯ ನಿರೂಪಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.ಪ್ರಾಚಾರ್ಯ ಸೀತಾಳದ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಮಾಜಿ ಅಧ್ಯಕ್ಷ ಆರೀಫ್ ಲೋಹಾರ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಶಿವಯೋಗಿ ಒಡೆಯರ, ಮಹ್ಮದ್‌ಫಾರೂಕ್ ಮೂಡಿ, ಬಸವರಾಜ ಒಬಣ್ಣನವರ, ಶೇಕಪ್ಪ ಬಮ್ಮನಹಳ್ಳಿ, ನಾಗರಾಜ ಭೈರೋಜಿ, ಸಮೀವುಲ್ಲಾ ಲೋಹಾರ, ರಾಜೂ ಶೇಷಗಿರಿ, ಗಣೇಶ ಹಳ್ಳೇರ, ಬಸವರಾಜ ಚವ್ಹಾಣ ಉಪಸ್ಥಿತರಿದ್ದರು.ಜೀವನ ಸಾರ್ಥಕವಾಗಲು ಸತ್ಕಾರ್ಯ ಮಾಡಿ

ಹಾವೇರಿ: ಇತ್ತೀಚಿನ ದಿನಗಳಲ್ಲಿ ಗುರು- ಶಿಷ್ಯರ ಸಂಬಂಧ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕಲಿತ ಶಾಲೆಗೆ ಮೂರು ಗ್ರೀನ್ ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಹಿರಿಯ ವಿದ್ಯಾರ್ಥಿಗಳು ಶಿಕ್ಷಣಪ್ರೇಮ ಹಾಗೂ ಗುರುಭಕ್ತಿಯನ್ನು ಮೆರೆದಿದ್ದಾರೆ.

ತಾಲೂಕಿನ ಅಗಡಿ ಗ್ರಾಮದ ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ 2003ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಗ್ರೀನ್ ಬೋರ್ಡ್ ನೀಡಿದರು.ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಗ್ರೀನ್ ಬೋರ್ಡ್ ಸ್ವೀಕರಿಸಿ ಮಾತನಾಡಿ, ಈ ವಿದ್ಯಾರ್ಥಿಗಳ ಕಾರ್ಯ ಬೇರೆಯವರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಿದೆ. ಜೀವನ ಸಾರ್ಥಕವಾಗಬೇಕಾದರೆ ಸತ್ಕಾರ್ಯಗಳನ್ನು ಮಾಡಬೇಕು. ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ ಎಂದರು.ಗೌರವ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯದಲ್ಲಿ ಸೇವೆಯಲ್ಲಿರುವ ಬಿ.ವಿ. ಹಿರೇಮಠ ಅವರು ಗುರುವಂದನೆ ಸ್ವೀಕರಿಸಿದರು.ಶಿಕ್ಷಣಚಿಂತಕ ನಿಜಲಿಂಗಪ್ಪ ಬಸೇಗಣ್ಣಿ, ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ರಾಘವೇಂದ್ರ ನಾಡಿಗೇರ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಗುರುಗಳಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಶಿಕ್ಷಕರ ಪರವಾಗಿ ಸೌಮ್ಯಾ ಬಸೇಗಣ್ಣಿ ವಿದ್ಯಾರ್ಥಿಗಳ ಪರವಾಗಿ ಚಂದ್ರು ಈಳಿಗೇರ, ವಿರುಪಾಕ್ಷಿ ಹೆಡಿಗೊಂಡ, ಗಣೇಶ ಕಡ್ಲಿ, ಪರಮೇಶ ಅಗಸಿಬಾಗಿಲ, ಪ್ರೇಮಾ ಚಕ್ರವರ್ತಿ, ತ್ರಿವೇಣಿ ಬಸೇಗಣ್ಣಿ, ಇಮ್ತಿಯಾಜ್ ಮಿಸ್ರಿಕೋಟಿ, ಅನ್ನಪೂರ್ಣ ಸಣ್ಣಪ್ಪನವರ ಮಾತನಾಡಿದರು.

ಗ್ರಾಮದ ಗಣ್ಯರಾದ ಶಿವಪುತ್ರಪ್ಪ ಬಸೇಗಣ್ಣಿ, ಚನ್ನವೀರಪ್ಪ ಬಸೇಗಣ್ಣಿ, ರೇಣುಕಾ ಹಲಕಣ್ಣನವರ, ಹೇಮಾ ದೊಡ್ಡಮನಿ, ಶಿಲ್ಪಾ ಸಂಕಣ್ಣನವರ, ಮಲ್ಲಪ್ಪ ಮಣ್ಣೂರ್ ಶಿಕ್ಷಕರು ವೇದಿಕೆಯಲ್ಲಿದ್ದರು.ಕವಿತಾ, ಪೂರ್ಣಿಮಾ ಪ್ರಾರ್ಥಿಸಿದರು. ಮಂಜುನಾಥ್ ವರೂರ ಸ್ವಾಗತಿಸಿದರು. ರಾಘವೇಂದ್ರ ಈಳಿಗೇರ ನಿರೂಪಿಸಿದರು. ರವಿರಾಜ್ ಇಟಗಿ ವಂದಿಸಿದರು.