ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಸೋಲಿಸಿ ರೈತ, ಕಾರ್ಮಿಕರ ಪಕ್ಷಗಳು ಅಧಿಕಾರಕ್ಕೆ ತರಬೇಕಿದೆ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ. ಸುರೇಶ್‍ಬಾಬು ತಿಳಿಸಿದರು.ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ, ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಮ್ಯುನಿಸ್ಟ್ ಕಚೇರಿ ಮುಂಭಾಗ ಶುಕ್ರವಾರ ನಡೆದ 49ನೇ ಹುತಾತ್ಮ ಕಾರ್ಮಿಕರ, ಮೇ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
1925ರ ಕಾಯ್ದೆಗಳನ್ನು ಸರ್ಕಾರ ಮಾರ್ಪಾಡು ಮಾಡಿದೆ. ಎಂಜಿನಿಯರಿಂಗ್ ಶಿಕ್ಷಣ ಪೂರೈಸಿ ಹೊರ ಬರುತ್ತಿರುವವರಿಗೆ ಉದ್ಯೋಗವಿಲ್ಲದಂತಾಗಿದೆ. ಸೂರಿಗಾಗಿ ಸಮರ ಯೋಜನೆಯಡಿ ನಗರದಲ್ಲಿ ಮನೆಗಳಿಗಾಗಿ ಏಳು ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದುವರೆವಿಗೂ ಒಬ್ಬರಿಗೂ ಮನೆಗಳು ಸಿಕ್ಕಿಲ್ಲ. ಮೇ.19 ರಿಂದ ನಗರಸಭೆ ತಾಲೂಕು ಪಂಚಾಯಿತಿ ಎದುರು ನಿರಂತರ ಧರಣಿ ನಡೆಸಲಾಗುವುದು. ಕಾರ್ಪೊರೇಟ್ ಕಂಪನಿಗಳಿಗೆ ಸಾಲ ಕೊಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕ್‍ಗಳನ್ನು ಖಾಸಗಿಕರಣಗೊಳಿಸಲು ಹೊರಟಿದೆ. ಇದರ ವಿರುದ್ಧ ಕಾರ್ಮಿಕರು, ರೈತರು ಎಚ್ಚೆತ್ತುಕೊಳ್ಳಬೇಕೆಂದರು.ಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಕಾಂ.ಬಿ.ಬಸವರಾಜ್ ಮಾತನಾಡಿ, ಆಳುವ ಸರ್ಕಾರಗಳು ಹೊಸ ಹೊಸ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರು, ರೈತರನ್ನು ಬೀದಿಪಾಲು ಮಾಡುತ್ತಿವೆ. ರಾಗಿ ಮತ್ತು ಮೆಕ್ಕೆಜೋಳ ಖರೀಧಿ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಕ್ವಿಂಟಲ್ ರಾಗಿಗೆ 1260 ರು. ನಷ್ಟವಾಗುತ್ತಿದೆ. ಸರ್ಕಾರವೇ ನೇರವಾಗಿ ಖರೀಧಿಸಬೇಕು. ಎಪಿಎಂಸಿಯಲ್ಲಿ 300 ಲೈಸೆನ್ಸ್ ಕಾರ್ಮಿಕರಿದ್ದಾರೆ. ಮುಂದಿನ ದಿನಗಳಲ್ಲಿ ಲೈಸೆನ್ಸ್‌ಗಾಗಿ ಕಾರ್ಮಿಕರು ಹೋರಾಡಬೇಕಾಗುತ್ತದೆ ಎಂದು ಹೇಳಿದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಮೊಳಕಾಲ್ಮೂರು ಜಾಫರ್ ಷರೀಫ್ ಮಾತನಾಡಿ, ನಾನಾ ವಲಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನುಗಳನ್ನು ಹೇರುತ್ತಿದೆ. ಅವೈಜ್ಞಾನಿಕ ಕಾನೂನುಗಳ ಜಾರಿಯಿಂದ ಕಾರ್ಮಿಕರು, ರೈತರ ಬದುಕು ದಿವಾಳಿಯಾಗುತ್ತಿದೆ. ಬೆಲೆ ಏರಿಕೆಯಾಗಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಕನಿಷ್ಟ ವೇತನ, ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಹೋರಾಟದಿಂದ ಮಾತ್ರ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ. ನ್ಯಾಯಾಲಯಗಳು ಸರ್ಕಾರದ ಪರವಾಗಿ ನಿಂತಿರುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತಿರುವ ಯಾವುದಾದರೂ ಪಕ್ಷವಿದೆಯೆಂದರೆ ಅದು ಭಾರತ ಕಮ್ಯುನಿಸ್ಟ್ ಪಕ್ಷ ಎಂದು ಶ್ಲಾಘಿಸಿದರು.
ರಾಜ್ಯ ರೈತ ಸಂಘದ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಎಐಟಿಯುಸಿ, ಹೊಸದುರ್ಗ ತಾಲೂಕು ಕಾರ್ಯದರ್ಶಿ ಕಾಂ.ಕುಮಾರಸ್ವಾಮಿ, ಎಐಟಿಯುಸಿ, ರಾಜ್ಯ ಉಪಾಧ್ಯಕ್ಷ ಕಾಂ.ಟಿ.ಆರ್.ಉಮಾಪತಿ, ಕಾಂ.ತಿಪ್ಪಮ್ಮ, ಕಾಂ.ಡಿ.ಮಹೇಶ್ವರಿ, ಕಾಂ.ಬಿ.ಎಚ್.ಹನುಮಂತಪ್ಪ, ಕಾಂ.ಕುಮಾರಣ್ಣ ಮಾತನಾಡಿದರು.
ಕಾಂ.ರಘುವೀರ್, ಕಾಂಎಂಬಿ ಜಯದೇವಮೂರ್ತಿ, ಕಾಂ.ಡಿ.ಪೆನ್ನಯ್ಯ, ಭಾರ್ಗವ ವೇದಿಕೆಯಲ್ಲಿದ್ದರು.ಕಾಂ.ಅಮಿನಾಬಿ, ಕಾಂ.ಈ.ಸತ್ಯಕೀರ್ತಿ, ಕಾಂ.ಡಿ.ಪೆನ್ನಯ್ಯ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಕಾರ್ಮಿಕರು ಮೇ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.