ಕೈ ಮೈತ್ರಿ ಧರ್ಮ ಪಾಲಿಸದ ಕಾರಣ ಮಂಡ್ಯ, ತುಮಕೂರಲ್ಲಿ ಸೋಲು

| Published : Apr 01 2024, 12:51 AM IST / Updated: Apr 01 2024, 05:25 AM IST

Nikil Kumaraswamy
ಕೈ ಮೈತ್ರಿ ಧರ್ಮ ಪಾಲಿಸದ ಕಾರಣ ಮಂಡ್ಯ, ತುಮಕೂರಲ್ಲಿ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮೈತ್ರಿ ಧರ್ಮ ಪಾಲಿಸದ ಕಾರಣ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲುವಂತಾಯಿತು.  

ಚನ್ನಪಟ್ಟಣ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮೈತ್ರಿ ಧರ್ಮ ಪಾಲಿಸದ ಕಾರಣ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲುವಂತಾಯಿತು. ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್‌ನವರು ಮೈತ್ರಿ ಧರ್ಮವನ್ನು ಕರಾರುವಕ್ಕಾಗಿ ಪಾಲಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದಿರಿ ಎಂಬುದನ್ನು ಮರೆಯಬಾರದು ಎಂದು ಸಂಸದ ಡಿ.ಕೆ.ಸುರೇಶ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ನಗರದ ಮಹದೇಶ್ವರ ನಗರದ ಬಳಿ ಹಮ್ಮಿಕೊಂಡಿದ್ದ ನಗರ ಹಾಗೂ ಹೊಂಗನೂರು ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ೨೦೧೯ರ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿ ಚುನಾವಣೆ ಎದುರಿಸಿದ್ದವು. ಆಗ ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸದ ಕಾರಣ ಮಂಡ್ಯದಲ್ಲಿ ನಾನು, ಹಾಸನದಲ್ಲಿ ದೇವೇಗೌಡರು ಸೋಲುವಂತಾಯಿತು ಎಂದು ಹೇಳಿದರು.

ಈ ಹಿಂದೆಯೇ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಹುಡುಕಬೇಕಿತ್ತು. ಆದರೂ ಈಗ ಎರಡು ಪಕ್ಷದವರು ಒಂದಾಗಿರುವುದರಿಂದ ಬಲ ಹೆಚ್ಚಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒಂದಾಗಿರುವುದರಿಂದ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್‌ಗೆ ಅತಿ ಹೆಚ್ಚು ಲೀಡ್ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.

ಅನಿವಾರ್ಯವಾಗಿ ಎಚ್‌ಡಿಕೆ ಮಂಡ್ಯಕ್ಕೆ: ಬಿಜೆಪಿ ವರಿಷ್ಠರು ಕುಮಾರಸ್ವಾಮಿ ಹಳೇ ಮೈಸೂರು ಭಾಗದಲ್ಲಿ ಯಾವುದಾದರೂ ಒಂದು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅನುಕೂಲ. ಇದಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ನಾವು ಮಂಡ್ಯದಲ್ಲಿ ಆರು ಕ್ಷೇತ್ರ ಕಳೆದುಕೊಂಡಿದ್ದೆವು. ಮಂಡ್ಯದಲ್ಲಿ ಕಾವೇರಿ ವಿಚಾರ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅನಿವಾರ್ಯ ರಾಜಕೀಯ ಬೆಳೆವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಲು ನಿರ್ಧರಿಸಿದರು ಎಂದು ಹೇಳಿದರು.

ಕಳೆದ 10 ವರ್ಷದಿಂದ ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಇದನ್ನು ಮೆಚ್ಚಿ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿಗೆ ಅನುಮತಿ ನೀಡಿದರು. ಈ ಬಾರಿ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆದ್ದು ಮೋದಿಯವರಿಗೆ ಉಡುಗೊರೆ ನೀಡಬೇಕು. ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿ ದೇಶಕ್ಕೆ ಒಂದು ಸಂದೇಶ ನೀಡಬೇಕು ಎಂದರು.

ರಾಮನಗರ ನಮಗೆ ರಾಜಕೀಯ ನೆಲೆ ನೀಡಿದ ಜಿಲ್ಲೆ. ಎಚ್‌ಡಿಕೆ ಎಲ್ಲಿ ಬೇಕಾದರೂ ಸ್ಪರ್ಧಿಸುವಂತ ವಾತಾವರಣವಿದ್ದರೆ ಅದಕ್ಕೆ ಜಿಲ್ಲೆ ನೀಡಿದ ಶಕ್ತಿಯೇ ಕಾರಣ. ಚನ್ನಪಟ್ಟಣದ ಜನರು ಸಹ ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆಗಲು ಸಹಕರಿಸಿದರು. ಎಲ್ಲರೂ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಎಚ್‌ಡಿಕೆ ಇಲ್ಲೇ ಇರಬೇಕು ಎಂದು ಬಯಸಿದ್ದರು. ಆದರೆ, ಅನಿವಾರ್ಯವಾಗಿ ಸನ್ನಿವೇಶ ನಿರ್ಮಾಣವಾಯಿತು ಎಂದರು. ಬಾಕ್ಸ್‌...........

ನಿಮ್ಮ ಮತವೇ ನನಗೆ ಹಾಲು ಸಕ್ಕರೆ

ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಮಾತನಾಡಿ, ದೇಶವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು 400 ಕ್ಷೇತ್ರದಲ್ಲಿ ಗೆಲವು ಸಾಧಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಬಯಕೆಯಾಗಿದೆ. ಇಲ್ಲಿನ ವಾತಾವರಣ ನೋಡಿದರೆ ಅದು ಈಡೇರುತ್ತದೆ ಎನ್ನಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನಗೆ ಮತ ನೀಡುವ ಮೂಲಕ ಹಾಲು ಸಕ್ಕರೆ ನೀಡಿ ಎಂದು ಮನವಿ ಮಾಡಿದರು.

ನಾವು ಎಷ್ಟು ಓದಿದ್ದೇವೆ, ಪ್ರಶಸ್ತಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ಜನರಿಗೆ ನೆರವಾಗುವುದು ಮುಖ್ಯ. ನನ್ನ ಸೇವಾವಧಿಯಲ್ಲಿ ಸರ್ಕಾರದ ಅನುದಾನದ ಜತೆ ದಾನಿಗಳ ನೆರವಿನಿಂದ ನಿಧಿ ಸ್ಥಾಪನೆ ಮಾಡಿದೆ. ಒಬ್ಬನೇ ರೋಗಿಯನ್ನೇ ಚಿಕಿತ್ಸೆ ನೀಡದೇ ಕಳುಹಿಸಲಿಲ್ಲ. ಕಾನೂನಿನ ನೆಪದಲ್ಲಿ ಜನರಿಗೆ ನೆರವಾಗದೇ ಇರಬಾರದು. ಕಾನೂನು ತಿದ್ದುಪಡಿ ಮಾಡಿ ನೆರವಾಗಬೇಕು ಎಂದು ಹೇಳಿದರು.

ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ನೀಡಿದ್ದು ದೇವೇಗೌಡರು. ಮಹಿಳಾ ಮೀಸಲಾತಿ ಪ್ರಸ್ತಾಪ ಮಾಡಿದ್ದು ದೇವೇಗೌಡರು, ಅನುಮೋದನೆ ನೀಡಿದ್ದು ಮೋದಿ. ರೈತರಿಗೆ ಸಬ್ಸಿಡಿ ನೀಡಿದ್ದು ದೇವೇಗೌಡರು, ರಾಮನಗರ ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ಇವರೆಲ್ಲರೂ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇವೆಲ್ಲ ನನಗೆ ಶ್ರೀರಕ್ಷೆಯಾಗಲಿವೆ.

-ಡಾ.ಮಂಜುನಾಥ್‌, ಎನ್‌ಡಿಎ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ