ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದಲ್ಲಿ ಬಹು ಸಂಖ್ಯಾತ ಸಂಸ್ಕೃತಿ, ಬಹುತ್ವ ಸಂಸ್ಕೃತಿಯ ನಾಶಪಡಿಸಿ, ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ ಜನತೆಗೆ ಕರೆ ನೀಡಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನಾದಿಯಿಂದಲೂ ಸಮಾಜದ ಸಾಧು, ಸಂತರು, ಸೂಫಿಗಳು, ತತ್ವ ಪದಕಾರರು ಪೋಷಿಸಿಕೊಂಡು ಬಂದ ಸೌಹಾರ್ದ ಸಂಸ್ಕೃತಿಯನ್ನೇ ಬಿಜೆಪಿ ನಾಶಪಡಿಸುತ್ತಿದೆ. ಒಕ್ಕೂಟದ ಸರ್ಕಾರವು 2020ರಲ್ಲಿ ರೈತ ವಿರೋಧಿ, ಕೃಷಿ ವಿರೋಧಿಯಾದ ಕೃಷಿ ಕಾಯ್ದೆಗಳ ಜಾರಿಗೊಳಿಸಿತ್ತು. ದೆಹಲಿ ಗಡಿಗಳಲ್ಲಿ ರೈತರು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ 13 ತಿಂಗಳ ಕಾಲ ನಿರಂತರವಾಗಿ ಪ್ರಬರ ಹೋರಾಟ ನಡೆಸಿದ ಪರಿಣಾಮ ಕರಾಳವಾದ ಮೂರೂ ಕಾಯ್ದೆಗಳ ಕೇಂದ್ರ ಹಿಂಪಡೆಯಿತು ಎಂದು ತಿಳಿಸಿದರು.
ಈಗಲೂ ದೆಹಲಿ ಗಡಿ ಭಾಗದಲ್ಲಿ ರೈತರ ಹೋರಾಟ ಮುಂದುವರಿದಿದೆ. ನರೇಂದ್ರ ಮೋದಿ ಸರ್ಕಾರವು ಅನೇಕ ವರ್ಷಗಳ ಕಾಲ ಕಾರ್ಮಿಕ ವರ್ಗವು ಹೋರಾಟಗಳನ್ನು ನಡೆಸಿ, ಪಡೆದಿದ್ದ ಪ್ರಗತಿಪರವಾದ 40 ಕಾರ್ಮಿಕ ಕಾನೂನುಗಳ ವಿಲೀನಗೊಳಿಸಿ, ನಾಲ್ಕು ಲೇಬರ್ ಕೋಡ್ ಗಳನ್ನಾಗಿ ಜಾರಿಗೊಳಿಸಿದೆ. ಇಂತಹ ಕಾರ್ಮಿಕ ವಿರೋಧಿಯಾದ ನಾಲ್ಕೂ ಕಾರ್ಮಿಕ ಕೋಡ್ ಗಳನ್ನು ಹಿಂಪಡೆಯಬೇಕು. ಮುಂದೆ ಇದ್ದಂತಹ ಕಾನೂನನ್ನೇ ಮತ್ತೆ ಜಾರಿಗೊಳಿಸಿ, ಕಾರ್ಮಿಕರ ಪರ ನಿಲ್ಲಲಿ ಎಂದು ಆಗ್ರಹಿಸಿದರು.ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮಕ್ಕೆ ಕಾಯ್ದೆ ರೂಪ ನೀಡುವಲ್ಲಿ ಮೋದಿ ಸರ್ಕಾರವು ವಿಫಲವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು 100 ದಿನಗಳ ಬದಲಾಗಿ 200 ದಿನಗಳಿಗೆ ಹೆಚ್ಚಿಸುವಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಉದ್ಯೋಗ ಖಾತರಿಗೆ ಸಮಾನವಾದ ಉದ್ಯೋಗ ಖಾತರಿ ಯೋಜನೆಯನ್ನೇ ಕಾರ್ಯಗತಗೊಳಿಸಿಲ್ಲ. ನಗರ ಪ್ರದೇಶದಲ್ಲೂ ಗ್ರಾಮೀಣ ಭಾಗದಲ್ಲಿರುವಂತೆ ನರೇಗಾ ಯೋಜನೆ ವಿಸ್ತರಿಸಿ, ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಯೂ ಆಗುತ್ತಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ದೇಶದಲ್ಲಿ ಭಯದ ವಾತಾವರಣ ಹುಟ್ಟು ಹಾಕುವ ಕೆಲಸವಾಗುತ್ತಿದೆ. ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿ ಕೈಗೆ ಅಧಿಕಾರ ನೀಡಬಾರದು ಎಂದು ಎಸ್.ಆರ್.ಹಿರೇಮಠ ಜನತೆಗೆ ಕೋರಿದರು.ಹಿರಿಯ ವಕೀಲ ಅನೀಸ್ ಪಾಷ, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಡಿಎಸ್ಸೆಸ್ ಮುಖಂಡ ಎಚ್.ಮಲ್ಲೇಶ ಇತರರಿದ್ದರು.