ಸಂವಿಧಾನ ವಿರೋಧಿ, ಕೋಮುವಾದಿ ಬಿಜೆಪಿ ಸೋಲಿಸಿ

| Published : Apr 21 2024, 02:18 AM IST

ಸಾರಾಂಶ

ದೇಶದ ಸಂವಿಧಾನ ನೀಡಿದ ಮತದಾನ ಅತ್ಯಂತ ಶ್ರೇಷ್ಠ, ಪವಿತ್ರವಾದ ಹಕ್ಕಾಗಿದೆ. ಅಂತಹ ಮತ ನೀಡುವ ಮುನ್ನ ಯಾರಿಗೆ, ಯಾತಕ್ಕಾಗಿ ಮತದಾನ ಮಾಡಬೇಕೆಂಬುದಾಗಿ ಆಲೋಚಿಸಿ, ಮತ ಚಲಾಯಿಸಬೇಕಿದೆ. ಇದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಾತ್ಯತೀತ ಪಕ್ಷಗಳನ್ನು ಗೆಲ್ಲಿಸಲು ಮಾನವ ಬಂಧುತ್ವ ವೇದಿಕೆ ಪ್ರೊ.ರಾಮಚಂದ್ರಪ್ಪ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದೇಶದ ಸಂವಿಧಾನ ನೀಡಿದ ಮತದಾನ ಅತ್ಯಂತ ಶ್ರೇಷ್ಠ, ಪವಿತ್ರವಾದ ಹಕ್ಕಾಗಿದೆ. ಅಂತಹ ಮತ ನೀಡುವ ಮುನ್ನ ಯಾರಿಗೆ, ಯಾತಕ್ಕಾಗಿ ಮತದಾನ ಮಾಡಬೇಕೆಂಬುದಾಗಿ ಆಲೋಚಿಸಿ, ಮತ ಚಲಾಯಿಸಬೇಕಿದೆ. ಇದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದೊಂದು ದಶಕದಿಂದ ದೇಶವನ್ನಾಳಿದ ಬಿಜೆಪಿ ಸರ್ಕಾರ ಲಾಭದಾಯಕವಾಗಿದ್ದ ಬೃಹತ್ತಾದ 27 ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದು, ದೇಶದ ಭ್ರಾತೃತ್ವ, ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಸಂವಿಧಾನಕ್ಕೆ ಅಪಾಯವನ್ನು ತಂದೊಡ್ಡುವ ಕೆಲಸ ಮಾಡುತ್ತಿದೆ. ಸಂವಿಧಾನಕ್ಕಿಂತ ಮನು ಸಂಹಿತೆಯನ್ನು, ಪೌರೋಹಿತ್ಯ ಮುನ್ನೆಲೆಗೆ ತರಲಾಗುತ್ತಿದೆ. ಇಡಬ್ಲ್ಯುಎಸ್‌ ಮೀಸಲಾತಿ ಮೂಲಕ ಮೀಸಲಾತಿ ಉದ್ದೇಶವನ್ನೇ ನಾಶಗೊಳಿಸಿದೆ ಎಂದು ಆರೋಪಿಸಿದರು.

ಸಾಂವಿಧಾನಿಕ ಭಾರತ, ಬಹುತ್ವದ ಭಾರತ, ಸಾಮರಸ್ಯ, ಸೌಹಾರ್ದತೆಯ ಭಾರತದ ಉಳಿವಿಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಕೋಮುವಾದಿ, ಧರ್ಮಾಂಧ ಪಕ್ಷಕ್ಕೆ ಮತ ನೀಡದೇ, ಜಾತ್ಯತೀತ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ 10 ವರ್ಷದಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡು ಓಡಾಡುತ್ತಿದೆ. ಆದರೆ, ಅಸಲಿಗೆ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏನೆಲ್ಲಾ ಆಗುತ್ತಿದೆ ಎಂಬುದನ್ನು ಜನರು ಕಾಣಬಹುದು. ಸಂವಿಧಾನವನ್ನು ನಾಶಪಡಿಸಲು ಮನುವಾದವನ್ನು ಜಾರಿಗೊಳಿಸಲು ಯತ್ನಿಸುತ್ತಿರುವ ಇಂತಹ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯುವುದು ದೇಶದ ಪ್ರಜೆಗಳ ಆದ್ಯ ಕರ್ತವ್ಯ. ರೈತರ ಸಾಲ ಮನ್ನಾ ಮಾಡಲು ತಿಣುಕುವ ಮೋದಿ ಸರ್ಕಾರ ಉದ್ಯಮಿಗಳ ₹10.56 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ, ಹಿರಿಯ ವಕೀಲ ಅನೀಸ್ ಪಾಷ, ಶಿವಕುಮಾರ ಮಾಡಾಳ್, ಪವಿತ್ರಾ, ಸತೀಶ ಅರವಿಂದ ಇತರರು ಇದ್ದರು.

- - - -20ಕೆಡಿವಿಜಿ2:

ದಾವಣಗೆರೆಯಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.