ಬಂಡವಾಳಶಾಹಿ ಪಕ್ಷಗಳನ್ನ ಸೋಲಿಸಿ: ಶರಣು ಗಡ್ಡಿ

| Published : May 06 2024, 12:30 AM IST

ಸಾರಾಂಶ

ಸರ್ವರಿಗೂ ಸಮಪಾಲು ಮತ್ತು ಸಮಬಾಳು ಸಿಗಬೇಕು ಎನ್ನುವುದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖ್ಯ ಧ್ಯೇಯವಾಗಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಿಂದ ಬಿರುಸಿನ ಪ್ರಚಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸರ್ವರಿಗೂ ಸಮಪಾಲು ಮತ್ತು ಸಮಬಾಳು ಸಿಗಬೇಕು ಎನ್ನುವುದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖ್ಯ ಧ್ಯೇಯವಾಗಿದೆ. ಅದಕ್ಕಾಗಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶರಣು ಗಡ್ಡಿ ಹೇಳಿದರು.

ಕೊಪ್ಪಳ ನಗರದ ಮುಖ್ಯ ರಸ್ತೆಗಳಲ್ಲಿ ಬಿರುಸಿನ ಪ್ರಚಾರ ಮಾಡಿ ಅವರು ಮಾತನಾಡಿದರು.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಎಂಟು ಕ್ಷೇತ್ರದ ಜನರ ಭೇಟಿ ಮಾಡಿದಾಗ ಒಳ್ಳೆಯ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ. ಆದರೆ ನೋವಿನ ವಿಷಯವೇನೆಂದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜನರ ಬವಣೆಗಳು, ಕಾರ್ಮಿಕರು ರೈತರ ಸಂಕಷ್ಟಗಳು, ಯುವ ಜನರಿಗೆ ಉದ್ಯೋಗ, ಎಲ್ಲ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಜೊತೆ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಮತ್ತು ನಗರದ ಬಡಾವಣೆಗಳಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು, ಸ್ವಚ್ಛತೆ ನೈರ್ಮಲ್ಯ ಚರಂಡಿ ಹಾಗೂ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ಔಷಧಿ ಕೊರತೆ ಎದ್ದು ಕಾಣುತ್ತಿದೆ. ಆದರೆ, ಇದ್ಯಾವುದಕ್ಕೂ ಇದುವರೆಗೂ ಆಡಳಿತ ನಡೆಸಿದವರು ಸ್ಪಂದನೆ ಮಾಡಿಯೇ ಇಲ್ಲ ಎಂದು ಕಿಡಿಕಾರಿದರು.

ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿಯ ನಾಯಕರು ತಮ್ಮ ವೈಯಕ್ತಿಕ ಅಭಿವೃದ್ಧಿ ಮಾಡಿಕೊಂಡು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಿಯೇ ಇಲ್ಲ ಎಂದು ಆರೋಪಿಸಿದರು.

ಮತ್ತೆ ಅಧಿಕಾರಕ್ಕೆ ಬರಲು ಚುನಾವಣಾ ಬಾಂಡ್ ಹೆಸರಲ್ಲಿ ಉದ್ಯಮಿಗಳಿಂದ ದೇಣಿಗೆ ಪಡೆದು ಜನಸಾಮಾನ್ಯರಿಗೆ ಆಮಿಷಗಳನ್ನು ಕೆಳಮಟ್ಟದ ರಾಜಕೀಯ ಮಾಡುತ್ತಿರುವ ಈ ಬಂಡವಾಳಶಾಹಿ ಪಕ್ಷಗಳನ್ನು ಸೋಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಕೃಷ್ಣ ಬೆಂಗಳೂರು, ಸದಸ್ಯರಾದ ಶರಣು ಪಾಟೀಲ್, ಗಂಗರಾಜ, ಶಾರದಾ, ಮಲ್ಲಪ್ಪ, ಮೌನೇಶ್ ಬಡಿಗೇರ್ ಇತರರಿದ್ದರು.