ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ದೇಶ ಹಾಗೂ ಸಂವಿಧಾನ ರಕ್ಷಣೆಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು. ದೇಶ ಹಾಗೂ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಹೀಗಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಲ ತುಂಬಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶ ಹಾಗೂ ಸಂವಿಧಾನ ರಕ್ಷಣೆಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು. ದೇಶ ಹಾಗೂ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಹೀಗಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಲ ತುಂಬಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.ಗೋಕಾಕನಲ್ಲಿ ಅಲ್ಪಸಂಖ್ಯಾತರ ಮುಖಂಡರು ಹಾಗೂ ಮುತವಲ್ಲಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಅಲ್ಪಸಂಖ್ಯಾತ ಸಮುದಾಯ ಒಟ್ಟಾಗಿ ಮತ ಹಾಕಿ ಗೆಲ್ಲಿಸಬೇಕು. ಮುಸ್ಲಿಂ ಸಮುದಾಯದ ಮತದಾನ ಪ್ರಮಾಣವೂ ಈ ಬಾರಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಅನುಷ್ಠಾನ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ, ಯುವಕರಿಗೆ ₹1 ಲಕ್ಷ ನೀಡುವ ಭರವಸೆ ನೀಡ ಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಬಡವರ ಪರ ಕಾಳಜಿಗೆ ಸಾಕ್ಷಿ ಎಂದು ತಿಳಿಸಿದರು.ಕೇಂದ್ರದಲ್ಲಿ 10 ವರ್ಷ ಅಧಿಕಾರ ನಡೆಸಿದ ನರೇಂದ್ರ ಮೋದಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೇ ದ್ವೇಷ ಭಾವನೆ ಕೆರಳಿಸಿ ಮತ ಕೇಳುತ್ತಿದ್ದಾರೆ. ಹಿಂದು, ಮುಸ್ಲಿಂ ಬಿಟ್ಟರೇ ಇವರಿಗೆ ಬೇರೆ ಏನೂ ಬೇಕಿಲ್ಲ. ಕರ್ನಾಟಕಕ್ಕೆ ಅತೀ ಹೆಚ್ಚು ಅನ್ಯಾಯ ಬಿಜೆಪಿ ಸರ್ಕಾರದಿಂದ ಆಗಿದೆ. ಇವರು ನಮಗೆ ಕೊಟ್ಟಿದ್ದು ಚೊಂಬು ಮಾತ್ರ ಎಂದು ಆರೋಪಿಸಿದರು. ಈ ವೇಳೆ ಡಯಾಸ್ ಕುಟ್ಟಿ ಹೇಳುವಾಗ ಅದರ ಮೇಲಿದ್ದ ಗಾಜು ಒಡೆಯಿತು.
ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮುಖಂಡರಾದ ಅಶೋಕ್ ಪೂಜಾರಿ, ಸಿರಾಜ್, ಮನ್ಸೂರ್, ಸಮೀರ್, ಶಾಕಿಬ್ ಮತ್ತಿತರರು ಉಪಸ್ಥಿತರಿದ್ದರು.