ಸಾರಾಂಶ
ಲೋಕಸಭೆ ಕ್ಷೇತ್ರದಾದ್ಯಂತ ತಾಲೂಕುವಾರು ಸಂಚಾರ ಮಾಡಿ ಕೋಮುವಾದ ವಿರುದ್ಧ ಪ್ರಚಾರ ಅಭಿಯಾನವನ್ನು ಕೊಂಡೊಯ್ಯಲಿದ್ದೇವೆ ಎಂದು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಕೊಪ್ಪಳ: ಕೋಮುವಾದ ಪ್ರಚೋದಿಸುತ್ತಿರುವ ಬಿಜೆಪಿಯನ್ನು ಸೋಲಿಸಬೇಕು ಎಂದು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರು, ರೈತ ಕಾರ್ಮಿಕರು, ಮಹಿಳೆಯರು ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು.ಲೋಕಸಭೆ ಕ್ಷೇತ್ರದಾದ್ಯಂತ ತಾಲೂಕುವಾರು ಸಂಚಾರ ಮಾಡಿ ಕೋಮುವಾದ ವಿರುದ್ಧ ಪ್ರಚಾರ ಅಭಿಯಾನವನ್ನು ಕೊಂಡೊಯ್ಯಲಿದ್ದೇವೆ ಎಂದರು.
ಬಿಜೆಪಿಯವರು ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಾರೆ. ಅಗತ್ಯ ಸಂದರ್ಭದಲ್ಲಿ ಸಂವಿಧಾನದ ತಿದ್ದುಪಡಿ ಮಾಡಬಹುದೆ ವಿನಃ ಮೂಲ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವಾಗಬಾರದು. ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದನ್ನು ಬಿಟ್ಟು, ಕೋಮುವಾದವನ್ನು ಪ್ರಚೋದಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದರು.ಸಿಪಿಐ (ಎಂಎಲ್) ಮುಖಂಡ ಡಿ.ಎಚ್. ಪೂಜಾರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ೪೦೦ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತೀರ್ಪಿಗಿಂತ ಮುಂಚೆಯೇ ಈ ರೀತಿ ಘೋಷಿಸುವುದು ಸರ್ವಾಧಿಕಾರದ ಧೋರಣೆ ಎಂದು ಕಿಡಿ ಕಾರಿದರು.
ಕಾರ್ಪೊರೇಟ್ ಸಂಸ್ಥೆಗಳೆ ಮೋದಿ ಅವರ ಅವಿಭಕ್ತ ಕುಟುಂಬಗಳಾಗಿವೆ. ಕಳೆದ ೧೦ ವರ್ಷಗಳಿಂದ ರೈತರ ಭೂಮಿ, ಸಾರ್ವಜನಿಕ ಸಂಪತ್ತು ಅದಾನಿ, ಅಂಬಾನಿ ಇತರ ಕಾರ್ಪೊರೇಟ್ ಕುಟುಂಬಗಳಿಗೆ ಸೇರುತ್ತಿವೆ. ಅವರ ಸಂಪತ್ತು ದುಪ್ಪಟ್ಟಾಗಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿನಲ್ಲಿದೆ. ದೇಶದ ಜನ ಹಸಿವು, ಬಡತನ, ನಿರುದ್ಯೋಗದ ಸುಳಿಯಲ್ಲಿ ನರಳುತ್ತಿದ್ದರೆ, ಬಿಜೆಪಿಯವರು ಮೋದಿ ಅವರ ಅಲೆಯಲ್ಲಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಈ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಿ ದೇಶದ ಸಂವಿಧಾನ, ಸಾರ್ವಭೌಮತ್ವವನ್ನು ರಕ್ಷಿಸಬೇಕು ಎಂದರು.ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಸಂಚಾಲಕರಾದ ಮುದುಕಪ್ಪ ನರೇಗಲ್, ಬಸವರಾಜ ಶೀಲವಂತರ್, ನಿಂಗರಾಜ ಬೆಣಕಲ್, ಕೆ.ಬಿ ಗೋನಾಳ ಇದ್ದರು.