ಸಾರಾಂಶ
ಕಳೆದ10 ವರ್ಷಗಳಿಂದ ಕೇಂದ್ರಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಾ ಜನರನ್ನು ವಂಚಿಸುತ್ತಾ ರಾಜ್ಯಕ್ಕೆ ಅನ್ಯಾಯ ಮಾಡಿದೆ, ಇದನ್ನು ಸರಿಪಡಿಸಬೇಕಾದರೆ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರ : ಕಳೆದ 10 ವರ್ಷಗಳಿಂದ ಕೇಂದ್ರಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಾ ಜನರನ್ನು ವಂಚಿಸುತ್ತಾ ರಾಜ್ಯಕ್ಕೆ ಅನ್ಯಾಯ ಮಾಡಿದೆ, ಇದನ್ನು ಸರಿಪಡಿಸಬೇಕಾದರೆ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಎಲ್ಲಾ ಅನುದಾನಗಳಲ್ಲಿ ಅನ್ಯಾಯವಾಗಿ, ದೇಶದ ಗೃಹ ಸಚಿವ ಅಮಿತ್ ಶಾ ಸುಳ್ಳನ್ನು ಹೇಳುತ್ತಿದ್ದಾರೆ. ಇಂತಹವರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.
ಭರವಸೆ ಈಡೇರಿಸಿಲ್ಲ:
ಬಿಜೆಪಿ ಸರ್ಕಾರ 10 ವರ್ಷ ಕೇಂದ್ರದಲ್ಲಿದ್ದರೂ ಕೊಟ್ಟ ಮಾತನ್ನು ಈಡೇರಿಸಿಲ್ಲ. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ರಾಜ್ಯದಲ್ಲಿ ಉಂಟಾದ ಬರಗಾಲವನ್ನು ನಮ್ಮ ಸಂಪನ್ಮೂಲಗಳಿಂದ ಎದುರಿಸಿದ್ದೇವೆ. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೂಡ ಬಂದಿಲ್ಲ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿದ್ದಾರೆ. ಈ ಬಾರಿ ಹನೂರು ಕ್ಷೇತ್ರದಲ್ಲಿ ಬಹುಮತ ಕೊಡಿಸುವುದಾಗಿ ಆರ್.ನರೇಂದ್ರ ಭರವಸೆ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ೩ ಲಕ್ಷ ಮತಗಳ ಅಂತರದಿಂದ . ಸುನೀಲ್‌ಬೋಸ್ ಗೆದ್ದು ಆರ್. ಧ್ರುವನಾರಾಯಣ್‌ರಂತೆ ನಂ. 1 ಸಂಸದನಾಗಬೇಕು ಇದಕ್ಕೆ ನಿಮ್ಮೆಲ್ಲರ ಆಶೀರ್ವಾದಬೇಕು ಎಂದರು.
3 ಲಕ್ಷ ಮತ ಅಂತರದಿಂದ ಗೆಲ್ಲಿಸಿ:
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸುನೀಲ್ ಬೋಸ್ ಅವರನ್ನು 3 ಲಕ್ಷ ಮತಗಳ ಅಂತರದಿಂದ ಚಾಮರಾಜನಗರದ ಜನತೆ ಗೆಲ್ಲಿಸಬೇಕು. ಸಂಸತ್ತಿಗೆ ಮಹದೇವಪ್ಪ ಅವರನ್ನು ಕಳುಹಿಸಿ ಎರಡನೇ ಅಂಬೇಡ್ಕರರನ್ನಾಗಿ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಅವರು ಒಪ್ಪಲಿಲ್ಲ. ಕ್ಷೇತ್ರದ ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು.
ಸುನೀಲ್ ಬೋಸ್ ನನ್ನ ಮಗನಿದ್ದಂತೆ, ಅವರನ್ನು ಸಂಸತ್ತಿಗೆ ಕಳುಹಿಸಬೇಕು. ಧ್ರುವನಾರಾಯಣ ಅವರ ಕನಸನ್ನು ನನಸು ಮಾಡಲು ನಾವು ಸುನೀಲ್ ಜೊತೆ ನಿಂತಿದ್ದೇವೆ. ಸಿದ್ದರಾಮಯ್ಯ ಚಾಮರಾಜನಗರದ ಮನೆ ಮಗ ಇದ್ದಂತೆ. ಅವರ ಮೇಲೆ ನಂಬಿಕೆ ಇಟ್ಟು ಮತ ನೀಡಬೇಕು. ಅವರ ಬೆಂಬಲಕ್ಕೆ ಮತದಾರರು ನಿಲ್ಲಬೇಕು.
ಕೊರೋನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರೂ ರಕ್ಷಣೆಗೆ ಯಾವ ಬಿಜೆಪಿಯವರು ಬರಲಿಲ್ಲ. ಸಹಾಯವನ್ನು ಮಾಡಲಿಲ್ಲ. ನಿಮ್ಮ ಸಹಾಯಕ್ಕೆ ಬಂದ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮರೆಯಬಾರದು. "ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ". ಕೊಟ್ಟ ಮಾತನ್ನು ನಾವು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಐದು ಬೆರಳು ಸೇರಿ ಕೈ ಗಟ್ಟಿಯಾಯಿತು. 5 ಗ್ಯಾರಂಟಿಗಳು ಸೇರಿ ಈ ಕೈ ಗಟ್ಟಿಯಾಯಿತು.
ಉಚಿತ ಅಕ್ಕಿ, ಬಸ್ ಪ್ರಯಾಣ, 2 ಸಾವಿರ ಗೃಹಲಕ್ಷ್ಮಿ ಹಣ ಸೇರಿದಂತೆ ಎಲ್ಲ ಯೋಜನೆಗಳು ಮನೆಗೆ ತಲುಪುತ್ತಿವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದೆವು. ಇಂತಹ ನಿರ್ಧಾರವನ್ನು ಮೋದಿಯವರು ಮಾಡಿದ್ದಾರೆಯೇ? 15 ಲಕ್ಷ ಎಲ್ಲಿ, ಅಚ್ಚೇದಿನ್ ಎಲ್ಲಿ, 2 ಕೋಟಿ ಉದ್ಯೋಗ ಎಲ್ಲಿ ಮಾನ್ಯ ಮೋದಿಯವರೇ?. ಅವರಿಂದ ಏನೂ ಆಗಲಿಲ್ಲ.
ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಸುನೀಲ್ ಬೋಸ್ ಅವರಿಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈಗ ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲದ ಜೊತೆಗೆ ಅವರ ಎಲ್ಲಾ ಹಿತೈಷಿಗಳ, ಬೆಂಬಲಿಗರ ಶಕ್ತಿಯನ್ನು ನಮಗೆ ನೀಡಿದ್ದಾರೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಎಚ್.ಎಂ. ಗಣೇಶ್‌ಪ್ರಸಾದ್, ದರ್ಶನ್ ಧ್ರುವನಾರಾಯಣ, ರವಿಶಂಕರ್, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿ.ಎನ್.ನಂಜುಂಡಸ್ವಾಮಿ, ಆರ್.ನರೇಂದ್ರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.