ಅವಿಶ್ವಾಸಕ್ಕೆ ಸೋಲು: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಬಿ.ಎಲ್ .ದೇವರಾಜು ಮುಂದುವರಿಕೆ

| Published : Jul 28 2024, 02:01 AM IST

ಅವಿಶ್ವಾಸಕ್ಕೆ ಸೋಲು: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಬಿ.ಎಲ್ .ದೇವರಾಜು ಮುಂದುವರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಚುನಾವಣೆಯಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಸೇರಿದಂತೆ ಎಲ್ಲಾ 14 ಜನ ನಿರ್ದೇಶಕರು ಜೆಡಿಎಸ್ ನಿಂದ ಚುನಾಯಿತರಾಗಿದ್ದರು. ಬದಲಾದ ಕ್ಷೇತ್ರ ರಾಜಕಾರಣದಲ್ಲಿ ಬಿ.ಎಲ್.ದೇವರಾಜು ಜೆಡಿಎಸ್ ತ್ಯಜಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಜಿತರಾಗಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ:

ಟಿಎಪಿಸಿಎಂಎಸ್ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದ್ದು, ಅಧ್ಯಕ್ಷರಾಗಿ ಬಿ.ಎಲ್.ದೇವರಾಜು ಮುಂದುವರೆದಿದ್ದಾರೆ.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಸೇರಿದಂತೆ ಒಟ್ಟು 14 ಜನ ಚುನಾಯಿತ ನಿರ್ದೇಶಕರಿದ್ದು, ಇಂದು ಮಂಡಿಸಿದ ಅವಿಶ್ವಾಸ ನಿರ್ಣಯ ಸಭೆಗೆ ಬಿ.ಎಲ್.ದೇವರಾಜು ಮತ್ತು ಅವರ ಬೆಂಬಲಿತ ಶಶಿಧರ್ ಸಂಗಾಪುರ, ಐಚನಹಳ್ಳಿ ಶಿವಣ್ಣ, ಬೊಪ್ಪನಹಳ್ಳಿ ಅಶೋಕ್ ಹಾಗೂ ಸುಕನ್ಯಾ ಲಕ್ಷ್ಮಣಗೌಡ ಸೇರಿ ಐದು ಜನ ನಿರ್ದೇಶಕರು ಮಾತ್ರ ಹಾಜರಾಗಿದ್ದರು.

ಅವಿಶ್ವಾಸ ನಿರ್ಣಯ ಸಭೆಗೆ ಕೋರಂ ಇಲ್ಲದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಭರತ್ ಕುಮಾರ್ ಅಧ್ಯಕ್ಷ ಬಿ.ಎಲ್.ದೇವರಾಜು ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ರದ್ದುಗೊಳಿಸಿ ಬಿ.ಎಲ್.ದೇವರಾಜು ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆಂದು ಪ್ರಕಟಿಸಿದರು.

ಕಳೆದ ಚುನಾವಣೆಯಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಸೇರಿದಂತೆ ಎಲ್ಲಾ 14 ಜನ ನಿರ್ದೇಶಕರು ಜೆಡಿಎಸ್ ನಿಂದ ಚುನಾಯಿತರಾಗಿದ್ದರು. ಬದಲಾದ ಕ್ಷೇತ್ರ ರಾಜಕಾರಣದಲ್ಲಿ ಬಿ.ಎಲ್.ದೇವರಾಜು ಜೆಡಿಎಸ್ ತ್ಯಜಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಜಿತರಾಗಿದ್ದರು.

ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿ ಕಾಂಗ್ರೆಸ್ ಪಕ್ಷ ಸೇರಿದ ಕಾರಣ ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ನೇತೃತ್ವದಲ್ಲಿ ಕೆಲವು ಸದಸ್ಯರು ಬಿ.ಎಲ್.ದೇವರಾಜು ಅವರ ರಾಜೀನಾಮೆಗೆ ಒತ್ತಾಯಿಸಲಾರಂಭಿಸಿದ್ದರು.

ಅವಿಶ್ವಾಸ ಮಂಡನೆಗೆ ಅಗತ್ಯವಾದ ಸದಸ್ಯರ ಬೆಂಬಲವಿಲ್ಲದ ಕಾರಣ ಬಿ.ಎಲ್.ದೇವರಾಜು ವಿರೋಧಿ ಬಣದ ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಹಕಾರ ವ್ಯಕ್ತಪಡಿಸುತ್ತಿದ್ದರು. ಅಂತಿಮವಾಗಿ ಅವಿಶ್ವಾಸ ಮಂಡನೆಗೆ ಅಗತ್ಯವಾದ 10 ಜನ ನಿರ್ದೇಶಕರ ಬೆಂಬಲ ಪಡೆಯುವಲ್ಲಿ ಸಫಲವಾದ ಶೀಳನೆರೆ ಮೋಹನ್ ಬಣದವರು ಕಳೆದ ತಿಂಗಳು ಅಧ್ಯಕ್ಷ ಬಿ.ಎಲ್.ದೇವರಾಜು ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದರು.

ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಇಂದು (ಶನಿವಾರ)ಸಭೆ ಕರೆಯಲಾಗಿತ್ತು. ಆದರೆ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿ ಸಹಿಹಾಕಿದ್ದ ನಿರ್ದೇಶಕಿ ಸುಕನ್ಯಾ ತಮ್ಮ ನಿಷ್ಠೆ ಬದಲಿಸಿ ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು ಪರ ನಿಂತರು.

ಅವಿಶ್ವಾಸ ನಿರ್ಣಯಕ್ಕೆ ಅಗತ್ಯವಾದ 10 ಜನ ಸದಸ್ಯರ ಬೆಂಬಲ ಇಲ್ಲದ ಕಾರಣ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದ ಉಳಿದ 9 ಜನ ನಿರ್ದೇಶಕರು ಸಭೆಗೆ ಗೈರು ಹಾಜರಾದರು. ಇದರಿಂದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದ್ದು ಬಿ.ಎಲ್.ದೇವರಾಜು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಎಂದು ಚುನಾವಣಾ ಅಧಿಕಾರಿ ಭರತ್ ಕುಮಾರ್ ಘೋಷಿಸಿದರು.