ಕಾಂಗ್ರೆಸ್‌, ಬಿಜೆಪಿಯಲ್ಲಿ ಪಕ್ಷಾಂತರ ಪರ್ವ

| Published : Apr 12 2024, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪಕ್ಷಾಂತರ ಪರ್ವವು ಯುಗಾದಿ ಚಂದ್ರದರ್ಶನದ ಮಾರನೆಯ ದಿನ ಹಾಗೂ ರಂಜಾನ್ ಹಬ್ಬದ ದಿನವಾದ ಗುರುವಾರದಿಂದ ಆರಂಭವಾದಂತಾಗಿದೆ.

- ಪಾಲಿಕೆ ಬಿಜೆಪಿ ಸದಸ್ಯ ಗೋಣೆಪ್ಪ ಕೈವಶ । ಕಾಂಗ್ರೆಸ್‌ಗೆ ಹಾರಿದ ಬಿಜೆಪಿ ವಾಗೀಶ, ನಾಲ್ವರು ಪುರಸಭೆ ಸದಸ್ಯರು - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪಕ್ಷಾಂತರ ಪರ್ವವು ಯುಗಾದಿ ಚಂದ್ರದರ್ಶನದ ಮಾರನೆಯ ದಿನ ಹಾಗೂ ರಂಜಾನ್ ಹಬ್ಬದ ದಿನವಾದ ಗುರುವಾರದಿಂದ ಆರಂಭವಾದಂತಾಗಿದೆ.

ನಗರದ ಶ್ರೀ ಕಲ್ಲೇಶ್ವರ ಮಿಲ್ ಆವರಣದಲ್ಲಿ ಬುಧವಾರ ರಾತ್ರಿಯಷ್ಟೇ ಬಿಜೆಪಿಯ ಹಿರಿಯ ಪಾಲಿಕೆ ಸದಸ್ಯ, ಪರಿಶಿಷ್ಟ ಜಾತಿ ಮುಖಂಡರೂ ಆದ ಗಾಂಧಿ ನಗರದ ಎಲ್.ಡಿ.ಗೋಣೆಪ್ಪ ಅವರು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖ ತಮ್ಮ ಭಾಗದ ಹಿರಿಯ ಮುಖಂಡರ ಸಮಕ್ಷಮ ಮಾತೃಪಕ್ಷ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಶಾಸಕರ ನಿವಾಸ ಶಿವ ಪಾರ್ವತಿಯಲ್ಲಿ ಗುರುವಾರ ಮಧ್ಯಾಹ್ನ ಹರಿಹರ ತಾಲೂಕು ಮಲೇಬೆನ್ನೂರಿನ ಬಿ.ಎಂ. ವಾಗೀಶ ಸ್ವಾಮಿ, ಮಲೇಬೆನ್ನೂರಿನ ನಾಲ್ವರು ಪುರಸಭೆ ಸದಸ್ಯರು, ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಾಜಿ ಶಾಸಕ ಎಸ್.ರಾಮಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ವಾಗೀಶ ಸ್ವಾಮಿ, ಮುಖಂಡರು, ಬೆಂಬಲಿಗರನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪಕ್ಷದ ಶಾಲು ಹಾಕಿ, ಕೈಗೆ ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಿದರು.

ಮಲೇಬೆನ್ನೂರು ಪುರಸಭೆ ಸದಸ್ಯರಾದ ಗೌಡರ ಮಂಜುನಾಥ, ಅಕ್ಕಮ್ಮ ಬಿ.ಸುರೇಶ, ಎಚ್.ಕೆ.ಸುಧಾ, ಪಿ.ಆರ್.ರಾಜು, ಬಿ.ಮಂಜುನಾಥ, ಮುಖಂಡರಾದ ಬಿ.ಸುರೇಶ, ಬಿ.ಚಂದ್ರಪ್ಪ, ಗೋವಿನಹಾಳ ದಯಾನಂದ, ಕೆ.ಜಿ.ರಾಜಪ್ಪ, ಕಡೇಮನಿ ದೇವೇಂದ್ರಪ್ಪ ಹೊಳೆ ಸಿರಿಗೆರೆ, ಮಂಜುನಾಥ ಸಿರಿಗೆರೆ, ಮಲ್ಲೇಶಪ್ಪ ಮಾಳಗಿ, ಪ್ರಕಾಶ, ಕಡ್ಲೇಗೊಂದಿ ಕೇಶವಮೂರ್ತಿ, ಓಬಳೇಶಪ್ಪ ಲೋಕಿಕೆರೆ, ಮಂಜಣ್ಣ ಕುರಿ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು.

ಹರಿಹರದ ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರ, ಯೂನಿಯನ್ ಬ್ಯಾಂಕ್‌ ಸಿರಿಗೆರೆ ರಾಜಣ್ಣ, ಬೆಳ್ಳೂಡಿ ಬಸವರಾಜ, ಮಂಜುನಾಥ ಪಟೇಲ್, ಆನಂದಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ್, ಪಾಲಿಕೆ ಸದಸ್ಯ ಎ.ನಾಗರಾಜ್, ಹುಲ್ಮನಿ ಗಣೇಶ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

- - - ಕೋಟ್‌

ಎರಡು ದಿನ ಕಾಲಾವಕಾಶ ಕೇಳಿದ್ದ ವಿನಯಕುಮಾರ ನಮಗೆ ಭೇಟಿಯಾಗಿಲ್ಲ. ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಬಂದು 6 ತಿಂಗಳಲ್ಲ 3 ತಿಂಗಳು ಸಹ ಆಗಿಲ್ಲ. ನಾನು ಶಾಸಕನಾಗಬೇಕು, ಸಂಸದನಾಗಬೇಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಕಾಯಬೇಕು. ಬಹಳ ಶ್ರಮಪಡಬೇಕು. ಜನರ ಕೆಲಸ ಮಾಡಬೇಕು. ಹೋರಾಟಗಳನ್ನು ಮಾಡಬೇಕು. ಏನೂ ಇಲ್ಲದೇ ಬಂದು, ನಾನು ಎಂಎಲ್ಎ ಆಗ್ಬೇಕು, ಎಂಪಿ ಆಗಬೇಕೆಂದರೆ ಹೇಗೆ?

- ಎಸ್‌.ರಾಮಪ್ಪ, ಮಾಜಿ ಶಾಸಕ, ಹರಿಹರ, ಕುರುಬ ಸಮಾಜ ಮುಖಂಡ

- - - (* ಒಂದೇ ಫೋಟೋ ಬಳಸಿ)-11ಕೆಡಿವಿಜಿ3, 4:

ಹರಿಹರ ತಾಲೂಕು ಮಲೇಬೆನ್ನೂರಿನ ಜಿಪಂ ಮಾಜಿ ಸದಸ್ಯ ಬಿ.ಎಂ.ವಾಗೀಶ ಸ್ವಾಮಿ, ನಾಲ್ವರು ಪುರಸಭೆ ಸದಸ್ಯರು ಬಿಜೆಪಿ ತೊರೆದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾದರು.