ಬಾಳೆಹೊನ್ನೂರು ದೇಶಾದ್ಯಂತ ನವೋದಯ ಶಾಲೆಯನ್ನು ಮತ್ತಷ್ಟು ಹೆಚ್ಚಿಸಿ ಇದರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸ ಬೇಕು ಎಂಬ ಯೋಜನೆ ಸರ್ಕಾರದ ಮುಂದಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

- ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ದೇಶಾದ್ಯಂತ ನವೋದಯ ಶಾಲೆಯನ್ನು ಮತ್ತಷ್ಟು ಹೆಚ್ಚಿಸಿ ಇದರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸ ಬೇಕು ಎಂಬ ಯೋಜನೆ ಸರ್ಕಾರದ ಮುಂದಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವ ದಲ್ಲಿ ಮಾತನಾಡಿದರು. ನಾನು ಈ ಹಿಂದೆ ಜಿಲ್ಲೆಗೆ ಒಂದು ಹೆಚ್ಚುವರಿ ನವೋದಯ ವಿದ್ಯಾಲಯದ ಕೊಡುವಂತೆ ಕೇಂದ್ರ ಮಂತ್ರಿಗಳ ಮುಂದೆ ಬೇಡಿಕೆಯಿಟ್ಟಿದೆ. ಆದರೆ ದೇಶದ ವಿವಿಧೆಡೆ ಎಲ್ಲಾ ಕಡೆಗಳಲ್ಲೂ ಜಿಲ್ಲೆಗೆ ಒಂದು ಜೆಎನ್‌ವಿ ಕೊಡಲು ಸಾಧ್ಯವಾಗಿಲ್ಲ. ಅದು ಪೂರ್ಣವಾದ ನಂತರ ಜಿಲ್ಲೆಗೆ ಹೆಚ್ಚುವರಿ ವಿದ್ಯಾಲಯ ನೀಡುವ ಭರವಸೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯುನ್ನತ ಶಿಕ್ಷಣ ನೀಡಬೇಕು ಎಂಬುದು ನವೋದಯ ವಿದ್ಯಾಲಯದ ಮೂಲ ಉದ್ದೇಶ. ಆ ಕಾರಣಕ್ಕೆ ನವೋದಯ ವಿದ್ಯಾಲಯ ಪ್ರಾರಂಭವಾಗಿ ಭಾರತ ದಾದ್ಯಂತ ಕೆಲಸ ಮಾಡುತ್ತಿದೆ. ನವೋದಯ ವಿದ್ಯಾಲಯದಲ್ಲಿ ಯಾರ ಪ್ರಭಾವವೂ ನಡೆಯುವುದಿಲ್ಲ. ವಿದ್ಯಾಲಯದ ಪ್ರವೇಶಕ್ಕೆ ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಗೆ ನೇರವಾಗಿ ಉತ್ತರ ಪತ್ರಿಕೆಗಳು ದೆಹಲಿಗೆ ತಲುಪುತ್ತವೆ. ಯಾರು ಹೆಚ್ಚು ಅಂಕ ತೆಗೆದುಕೊಂಡಿರುತ್ತಾರೋ ಅವರಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡುತ್ತಾರೆ. ಕೆಲ ವಿದ್ಯಾರ್ಥಿಗಳು ಬಾರದಿದ್ದರೆ ಆದ್ಯತೆ ಮೇರೆಗೆ ಕೆಳಗಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾರೆ. ಅತ್ಯಂತ ಉತ್ಕೃಷ್ಟವಾದ ಶಿಕ್ಷಣ ಕೊಡುವ ವಿದ್ಯಾ ಸಂಸ್ಥೆ ಇದಾಗಿದೆ. ಸಮಾಜದಲ್ಲಿ ಅನೇಕ ಚರ್ಚೆಗಳು ಇಂದು ನಡೆಯುತ್ತಿವೆ. ಸಮಾನತೆ ದೃಷ್ಟಿಯಿಂದ ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಅತ್ಯುತ್ತಮ ಶಾಲೆಗಳು ಇರಬೇಕು ಎಂದು ಹೇಳುತ್ತಾರೆ. ಕೆಲವು ಕಡೆಗಳಲ್ಲಿ ನವೋದಯ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪಡೆಯಬೇಕಾದರೆ ಲಕ್ಷಾಂತರ ರು. ದೇಣಿಗೆ ನೀಡಬೇಕಿದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮೆರಿಟ್ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವ ಶಾಲೆಯಾಗಿ ನವೋದಯ ವಿದ್ಯಾಲಯ ರಾಷ್ಟ್ರದಲ್ಲಿ ಮೂಡಿ ಬಂದಿದೆ. ರಾಜ್ಯ ಸರ್ಕಾರದಡಿ ಪ್ರಸ್ತುತ 48 ಸಾವಿರ ಸರ್ಕಾರಿ ಶಾಲೆಗಳನ್ನು ನಡೆಸುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಮುಂದಿನ 2 ವರ್ಷಗಳಲ್ಲಿ ಸುಮಾರು 7 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಿದೆ. ಇದಕ್ಕೆ ವಿದ್ಯಾರ್ಥಿ ಗಳು ಇಲ್ಲದೇ ಇರುವುದು ಹಾಗೂ ಬೇರೆ ಸಮಸ್ಯೆಗಳು ಕಾರಣವಾಗಿವೆ. ಪೋಷಕರಿಗೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಬೇಕೆಂಬ ಹಂಬಲ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆಗೆ ಶಕ್ತಿ ಕೊಡುವ ಶಾಲೆಯಾಗಿ ನವೋದಯ ವಿದ್ಯಾಲಯ ಮೂಡಿಬಂದಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸೀಗೋಡು ಜೆಎನ್‌ವಿಗೆ ಈ ಹಿಂದೆ ರಾಜ್ಯಸಭಾ ಸದಸ್ಯ ಜಯ ರಾಮ್ ರಮೇಶ್ ಅವರಿಂದ ₹45 ಲಕ್ಷ ಅನುದಾನ ಕೊಡಿಸಿ ಶಾಲೆ ಕಟ್ಟಡಗಳನ್ನು ದುರಸ್ಥಿಗೊಳಿಸಲಾಗಿದೆ. ವಿದ್ಯಾಲಯದ ಆವರಣದ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು ಅದನ್ನು ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಬಿಸಿ ನೀರಿನ ಸಮಸ್ಯೆ ಹೆಚ್ಚಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮುಂದಿನ ಆರು ತಿಂಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಪೀಡಿತರಾದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಜೀಪ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದು 2 ತಿಂಗಳೊಳಗೆ ಇದಕ್ಕೆ ಕ್ರಮಕೈಗೊಳ್ಳಲಾಗುವುದು.ಬದುಕಿಗೆ ಶಿಕ್ಷಣವೇ ಪ್ರಮುಖ ಅಂಗವಾಗಿದ್ದು, ಶಿಕ್ಷಣವಿಲ್ಲದ ಬದುಕು ನಿರರ್ಥಕ. ಇಂದು ಮಾಹಿತಿ ತಂತ್ರಜ್ಞಾನ ಹೆಚ್ಚು ಮುಂದುವರಿದಿದ್ದು, ಇದಕ್ಕೆ ಶಿಕ್ಷಣ ಅಗತ್ಯವಾಗಿ ಇರಬೇಕಿದೆ. ಮಕ್ಕಳಿಗೆ ಶಿಕ್ಷಣದ ಕೊರತೆ ಎಂದಿಗೂ ಆಗಬಾರದು. ಶಿಕ್ಷಣಕ್ಕೆ ಆದ್ಯತೆ ನೀಡಿದ ದೇಶಗಳು ಆರ್ಥಿಕತೆಯಲ್ಲಿ ಮುಂದುವರಿ ದಿರುವುದನ್ನು ನಾವು ಕಾಣಬಹುದು ಎಂದರು.ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಉದ್ಯಮಿ ವಿಕಾಸ್ ಬೇಗಾನೆ, ಹೇರೂರು ಗ್ರಾಪಂ ಅಧ್ಯಕ್ಷ ಎಚ್.ಸಿ.ಅಶ್ವಥ್, ಪ್ರಾಚಾರ್ಯ ರಮೇಶ್ ನಾಯ್ಕ್, ಪಿಟಿಸಿ ಸಮಿತಿ ಸದಸ್ಯರಾದ ಹೂವಪ್ಪ, ಪ್ರಭಾಕರ್, ನಾಗರಾಜ್ ಕೊಪ್ಪ, ಗಗನ ನಾಯ್ಡು, ವಿಶಾಲಾಕ್ಷಿ ಮತ್ತಿತರರು ಹಾಜರಿದ್ದರು.೨೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ವಾರ್ಷಿ ಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕೋಟಾ ಶ್ರೀನಿವಾಸ ಪೂಜಾರಿ, ಟಿ.ಡಿ.ರಾಜೇಗೌಡ, ಎನ್.ಎಂ.ನಾಗರಾಜ್, ವಿಕಾಸ್ ಬೇಗಾನೆ, ಅಶ್ವಥ್ ಇದ್ದರು.