ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ನಿರಂತರವಾಗಿ ಕಾಡಾನೆಗಳು ಜಮೀನಿಗೆ ಲಗ್ಗೆಯಿಟ್ಟು ಬೆಳ್ಳುಳ್ಳಿ, ಆಲೂಗಡ್ಡೆ, ನವಿಲುಕೋಸು ಬೆಳೆ ಹಾನಿಯಾಗಿರುವ ಬಗ್ಗೆ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಗಡಿಗ್ರಾಮ ಚಿಕ್ಕ ಹುಣಸೆಪಾಳ್ಯ ಗ್ರಾಮದ ರೈತ ಪ್ರಸಾದ್ ಮತ್ತು ಮಾದೇವಪ್ಪ ಅವರಿಗೆ ಸೇರಿದ ಬೆಳ್ಳುಳ್ಳಿ, ಆಲೂಗಡ್ಡೆ, ನವಿಲುಕೋಸು ಮತ್ತು ಕೃಷಿ ಚಟುವಟಿಕೆಯ ಪರಿಕರಗಳನ್ನು ಕಾಡಾನೆಗಳು ರಾತ್ರಿ ವೇಳೆ ಜಮೀನಿಗೆ ನುಗ್ಗಿ ತುಳಿದು ನಾಶಪಡಿಸಿದ್ದು, ಲಕ್ಷಾಂತರ ರು. ನಷ್ಟ ಉಂಟು ಮಾಡಿದೆ ಎಂದು ರೈತರು ಆರೋಪಿಸಿದರು.ಕಳೆದ ಒಂದು ವಾರದಿಂದ ನಿರಂತರವಾಗಿ ಕಾಡಾನೆಗಳು ರೈತರ ಜಮೀನಿಗೆ ರಾತ್ರಿ ವೇಳೆ ಜೋಡಿ ಆನೆಗಳು ಲಗ್ಗೆಯಿಟ್ಟು ಬೆಳ್ಳುಳ್ಳಿ, ಎಲೆಕೋಸು ಮತ್ತು ಆಲೂಗಡ್ಡೆ ಫಸಲನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ತಡೆಗಟ್ಟಲು ವಿಫಲರಾಗಿದ್ದಾರೆ. ಜೊತೆಗೆ ನಿರಂತರವಾಗಿ ಕಾಡಾನೆಗಳು ರೈತರ ಜಮೀನಿಗೆ ಬರುತ್ತಿರುವ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸೌಜನ್ಯಕ್ಕಾದರೂ ರೈತರ ಜಮೀನಿಗೆ ಬಂದು ಬೆಳೆ ನಷ್ಟ ಅಂದಾಜು ಪಟ್ಟಿ ತಯಾರಿಸಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಿಲ್ಲ ಎಂದು ರೈತಾಪಿ ವರ್ಗ ಬೇಸರ ವ್ಯಕ್ತಪಡಿಸಿದೆ. ಅರಣ್ಯದಂಚಿನಲ್ಲಿ ಬರುವ ಗ್ರಾಮ ಹುಣಸೆಪಾಳ್ಯ ರೈತರ ಜಮೀನುಗಳಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟದ ಅಂದಾಜು ಪಟ್ಟಿ ತಯಾರಿಸಿ ರೈತರು ನೀಡುವ ಜಮೀನಿನ ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಆರ್‌ಎಫ್‌ಒ ಶಿವರಾಂ, ಪಿಜಿ ಪಾಳ್ಯ ವಲಯ ಅರಣ್ಯ ಅಧಿಕಾರಿಬಿಆರ್ಟಿ ವಲಯ ಅರಣ್ಯ ಪ್ರದೇಶದಿಂದ ಬರುತ್ತಿರುವ ಕಾಡಾನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ರು. ವೆಚ್ಚ ಮಾಡಿ ತಮಿಳುನಾಡಿನಿಂದ ಬಿತ್ತನೆ ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ಎಲೆಕೋಸು ಜಮೀನಿನಲ್ಲಿ ಬೆಳೆಯಲಾಗಿದೆ. ಫಸಲು ಬರುವ ಮುನ್ನವೇ ಕಾಡಾನೆಗಳು ಬಂದು ತುಳಿದು ಬೆಳೆಯನ್ನು ನಾಶಪಡಿಸಿ ಲಕ್ಷಾಂತರ ರು. ನಷ್ಟ ಉಂಟಾಗಿದೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಮೂಲಕ ಶಾಶ್ವತ ಪರಿಹಾರ ನೀಡಬೇಕು.-ಸದಾನಂದ, ಚಿಕ್ಕಹುಣಸೆ ಪಾಳ್ಯ ರೈತ ಮುಖಂಡ