ನಿಷ್ಕ್ರಿಯಗೊಂಡ ರಾಜ್ಯ ಸರ್ಕಾರ: ಜೋಶಿ

| Published : Oct 08 2024, 01:04 AM IST

ಸಾರಾಂಶ

ಗ್ರಾಪಂ ಸದಸ್ಯರು ಬಿಜೆಪಿಯವರಷ್ಟೇ ಅಲ್ಲದೇ ತಮ್ಮದೇ ಪಕ್ಷದ ಸದಸ್ಯರು ಇದ್ದಾರೆ. ಇಂದು ಅವರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದರೆ ಇದು ತಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ ಅಲ್ಲವೇ?.

ಹುಬ್ಬಳ್ಳಿ:

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ನೆಲಕಚ್ಚಿದ್ದು, ಸರ್ಕಾರ ನಿಷ್ಕ್ರಿಯಗೊಂಡಿದೆ. ಅಭಿವೃದ್ಧಿ ಶೂನ್ಯ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜನರ ಒಂದು ಸಣ್ಣ ಕೆಲಸವೂ ಸರ್ಕಾರದ ಕಡೆಯಿಂದ ಆಗುತ್ತಿಲ್ಲ, ಕಳೆದ 4 ದಿನಗಳಿಂದ ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಎಲ್ಲ ವರ್ಗದ ಸಿಬ್ಬಂದಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಯಾವ ಕೆಲಸವೂ ಆಗದೇ ಜನ ಹೈರಾಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮಮಟ್ಟದ ಜನಪ್ರತಿನಿಧಿಗಳ ಮತ್ತು ಆಡಳಿತ ವರ್ಗದ ನ್ಯಾಯಯುತ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸುವಲ್ಲಿ ಸರ್ಕಾರ ನಿರಾಸಕ್ತಿ ತೋರಿಸಿದ್ದೇ ಮುಷ್ಕರಕ್ಕೆ ಕಾರಣವಾಗಿದೆ. ಗ್ರಾಮೀಣ ಜನರಿಗೆ ಸಿಗಬೇಕಿದ್ದ ಇ-ಸ್ವತ್ತು, ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಎಲ್ಲ ಸೇವೆ ಸ್ಥಗಿತವಾಗಿವೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಷ್ಕರ ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ. ಗ್ರಾಮಾಡಳಿತದ ಬಗ್ಗೆ ತಾತ್ಸಾರ ಮನೋಭಾವ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗ್ರಾಪಂ ಸದಸ್ಯರು ಬಿಜೆಪಿಯವರಷ್ಟೇ ಅಲ್ಲದೇ ತಮ್ಮದೇ ಪಕ್ಷದ ಸದಸ್ಯರು ಇದ್ದಾರೆ. ಇಂದು ಅವರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದರೆ ಇದು ತಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ ಅಲ್ಲವೇ? ಒಂದೀವರೆ ವರ್ಷಗಳಿಂದ ಸರ್ಕಾರದ ಕಾರ್ಯದ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಇನ್ನಾದರೂ ಒಳ್ಳೆಯ ಕೆಲಸ ಮಾಡಿ ಎಂದು ಒತ್ತಾಯಿಸಿದ್ದಾರೆ.