ಅತಿಥಿ ಉಪನ್ಯಾಸಕರ ನೇಮಕ ವಿಳಂಬ, ಪ್ರತಿಭಟನೆ

| Published : Sep 05 2025, 01:00 AM IST

ಸಾರಾಂಶ

ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಈ ವರೆಗೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲ. ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು ಈ ವರೆಗೂ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ.

ಕೊಪ್ಪಳ:

ಅತಿಥಿ ಉಪನ್ಯಾಸಕರ ನೇಮಕ ವಿಳಂಬದಿಂದ ಪದವಿ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಶೈಕ್ಷಣಿಕ ಗೊಂದಲ ಪರಿಹರಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗುರುವಾರ ನಗರದ ಅಶೋಕ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಯ್ಯಾಳಪ್ಪ ಮಾತನಾಡಿ, ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಈ ವರೆಗೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲ. ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು ಈ ವರೆಗೂ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ. ಇದು ಅವರ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿದೆ. ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ಪಾಠಗಳು ಇನ್ನೂ ಆರಂಭವಾಗಿಲ್ಲ ಎಂದು ಆರೋಪಿಸಿದರು.

ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೆ. ಮಾತನಾಡಿ, ಅತಿಥಿ ಉಪನ್ಯಾಸಕರಿಲ್ಲದೇ ಪದವಿ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಶೈಕ್ಷಣಿಕ ಸಮಸ್ಯೆ ಹಾಗೂ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಆಗಿರುವ ಗೊಂದಲವನ್ನು ಸರ್ಕಾರ ಕೂಡಲೇ ಬಗೆಹರಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ಆಗ್ರಹಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಈ ವೇಳೆ ಜಿಲ್ಲಾ ಕಾರ್ಯಕರ್ತರಾದ ಪ್ರದೀಪ್, ಶರಣಪ್ಪ, ಅಪ್ಪಾಜಿ, ತಿರುಪತಿ, ವಿದ್ಯಾರ್ಥಿಗಳಾದ ರುಕ್ಸನಾ ಬೇಗಂ, ಸಾವಿತ್ರಿ, ತುಳಸಿ, ಆಕಾಶ್, ಹುಲಿಗಮ್ಮ, ಲಕ್ಷ್ಮಿ,ನೇತ್ರಾ, ದರ್ಶನ್, ಮಲ್ಲಪ್ಪ, ಸಂತೋಷ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.