ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ಜೊತೆಗೆ ಇ-ಸ್ವತ್ತು ನೀಡಲು ಇರುವ ತಂತ್ರಾಂಶ ಅನುಷ್ಟಾನ ವಿಳಂಬ ನಿವಾರಿಸಿ, ತ್ವರಿತವಾಗಿ ಇ-ಸ್ವತ್ತು ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮಹಾನಗರ ಪಾಲಿಕೆ ಮಾಜಿ ಸದಸ್ಯರ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.ನಗರದ ಪಾಲಿಕೆ ಆವರಣದಲ್ಲಿ ಒಕ್ಕೂಟದ ನೇತೃತ್ವದಲ್ಲಿ ಪಾಲಿಕೆ ಮಾಜಿ ಸದಸ್ಯರು, ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಹಾ ನಗರ ಪಾಲಿಕೆ ಆಯುಕ್ತೆ ರೇಣುಕಾ ಮುಖಾಂತರ ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಒಕ್ಕೂಟದ ಮುಖಂಡರು, ಪಾಲಿಕೆಯಿಂದ ಇ-ಆಸ್ತಿ ತಂತ್ರಾಂಶ ಅನುಷ್ಟಾನಗೊಳಿಸುವಲ್ಲಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇ-ಆಸ್ತಿ ತಂತ್ರಾಂಶ ಅನುಷ್ಠಾನದ ಉದ್ದೇಶ ಕಂದಾಯ ಶಾಖೆಯಿಂದ ನೀಡುವ ಸೇವೆ ಸರಳೀಕರಣಗೊಳಿಸುವುದು, ನಾಗರೀಕರಿಗೆ ಉತ್ತಮ ಸೇವೆ ಒದಗಿಸುವುದು. ಕಾಯ್ದೆ ಹಾಗೂ ನಿಯಮಾವಳಿಗಳ ಪ್ರಕಾರ ಅಭಿವೃದ್ಧಿಪಡಿಸಿರುವ ತಂತ್ರಾಂಶದ ಮೂಲಕವೇ ಮುಂದೆ ಕಂದಾಯ ಶಾಖೆ ನೀಡುವ ಸೇವೆಗಳನ್ನು ತೆರಿಗೆದಾರರು, ಸಾರ್ವಜನಿಕರಿಗೆ ಒದಗಿಸಬೇಕು ಎಂದು ಹೇಳಿದರು.ವಿವಿಧ ವಾರ್ಡ್‌ಗಳ ಸ್ವತ್ತುಗಳನ್ನು ಇ-ಆಡಳಿತ ತಂತ್ರಾಂಶದಲ್ಲೂ ಅಧಿಕೃತ ಆಸ್ತಿಗಳೆಂದೇ ಪರಿಗಣಿಸಿ, ಅವುಗಳಿಗೆ ದಾಖಲೆ ಕೇಳದೇ, ಅವುಗಳನ್ನೇ ಅಪ್ ಲೋಡ್ ಮಾಡಿಕೊಂಡು, ಅಧಿಕೃತಗೊಳಿಸಿ, ಇ-ಆಸ್ತಿ ತಂತ್ರಾಂಶ ಅಖೈರುಗೊಳಿಸಬೇಕಿದೆ. ಸ್ವತ್ತಿನ ಮಾಲೀಕರು ಈಗಾಗಲೇ ತಮ್ಮ ಆಸ್ತಿಗೆ ಕಂದಾಯ ಶಾಖೆ ನಿಗದಿಪಡಿಸಿದ ಆಸ್ತಿ ಶುಲ್ಕ, ಒಳ ಚರಂಡಿ, ಘನತ್ಯಾಜ್ಯ ಶುಲ್ಕವನ್ನು ಪ್ರತಿ ವರ್ಷ ಏಕಕಾಲಕ್ಕೆ ಬ್ಯಾಂಕ್ ಮೂಲಕ ಪಾವತಿಸುತ್ತಾರೆ. ಅದರ ಒಂದು ಪ್ರತಿಯನ್ನು ಕಂದಾಯ ಶಾಖೆಗೆ ನೀಡುತ್ತಾರೆ. ಅದೇ ರೀತಿ ನೀರಿನ ಕಂದಾಯವನ್ನೂ ಪಾವತಿಸುತ್ತಾರೆ ಎಂದು ತಿಳಿಸಿದರು.
ಕಂದಾಯ ಪಾವತಿಸಿದ ದಾಖಲೆ ಕಾಯ್ದಿರಿಸುವುದು ಕಂದಾಯ ಶಾಖೆಯ ಕರ್ತವ್ಯ. ಇವುಗಳನ್ನು ಇ-ತಂತ್ರಾಂಶಕ್ಕೆ ಅಳವಡಿಸಿ, ಇ-ಸ್ವತ್ತಿನ ನಮೂನೆಯನ್ನು ಸ್ವತ್ತಿನ ಮಾಲೀಕರಿಗೆ ನೀಡಬೇಕು. ಯಾರು ತೆರಿಗೆ ಶುಲ್ಕ ನೀಡಿರುವುದಿಲ್ಲವೋ ಅಂತಹವರಿಗೆ ನೋಟೀಸ್ ನೀಡಲಿ. ಪಾಲಿಕೆಯಲ್ಲಿ ಸ್ವತ್ತಿನ ಮಾಲೀಕರು ಸ್ವತ್ತು ತಮ್ಮ ಹೆಸರಿಗೆ ಕಚೇರಿಯಲ್ಲಿ ನೋಂದಣಿಯಾದ ನಂತರ ತಮ್ಮ ಹೆಸರಿಗೆ ಪಾಲಿಕೆಯಲ್ಲಿ ಖಾತೆ ನಂಬರ್ ಪಡೆಯಬೇಕಾದಾಗ ಸಂಪೂರ್ಣ ಮಾಹಿತಿ, ದಾಖಲೆ ನೀಡುತ್ತಾರೆ. ಇಸಿ, ಕ್ರಯಪತ್ರ, ದಾನಪತ್ರ, ಪಾಲು ವಿಭಾಗ ಪತ್ರ, ಇತರೆ ನೋಂದಣಿ ದಾಖಲೆ ನೀಡಿ, ಖಾತೆ ಪಡೆದಿರುತ್ತಾರೆ. ಅದನ್ನೇ ಇ-ತಂತ್ರಾಂಶಕ್ಕೆ ಅಳಡಿಸಿ, ಇ-ಆಸ್ತಿ(ನಮೂನೆ-2) ನೀಡಬೇಕು ಎಂದು ಅವರು ಹೇಳಿದರು.ಸ್ವತ್ತಿನ ಪ್ರಕಾರ ಖಾಲಿ ನಿವೇಶನವಾಗಿದ್ದರೆ ತಮ್ಮ ಬಳಿ ಇರುವ ನೋಂದಾವಣಿ ದಾಖಲೆಯನ್ನು ಇ-ತಂತ್ರಾಂಶಕ್ಕೆ ಅಳವಡಿಸಬೇಕು. ಕಟ್ಟಡವಾಗಿದ್ದಲ್ಲಿ ಸಂಪೂರ್ಣ ಚೆಕ್ ಬಂದ್ ವಿವರ ಸಮೇತ ಎಂಜಿನಿಯರಿಂಗ್ ಶಾಖೆಯಿಂದ ಕಟ್ಟಡ ನಿರ್ಮಿಸುವ ಯೋಜನೆ ಒಪ್ಪಿಗೆ ಪಡೆದು, ಅದಕ್ಕೆ ತಗುಲುವ ಶುಲ್ಕ ಭರಿಸಿ, ಕಟ್ಟಡ ಕಟ್ಟಿರುತ್ತೇವೆ. ಅದಕ್ಕೆ ಸಂಬಂಧಿಸಿದ ದಾಖಲೆ ವಿವರ ಪಾಲಿಕೆಯಲ್ಲೇ ಇರುತ್ತದೆ. ಅದನ್ನೇ ಇ-ತಂತ್ರಾಂಶಕ್ಕೆ ಅಳವಡಿಸಿಕೊಂಡು, ಇ-ಆಸ್ತಿ ಫೈಲ್(ನಮೂನೆ-2) ನೀಡಬೇಕು. ದೂಡಾದಿಂದ ಬಡಾವಣೆ ಅನುಮೋದನೆ ಪತ್ರ, ನಕ್ಷೆ ಸಹ ನಿಮ್ಮ ಕಚೇರಿಯಲ್ಲೇ ಇರುತ್ತವೆ. ಅವುಗಳನ್ನೂ ಇ-ತಂತ್ರಾಂಶಕ್ಕೆ ಅಳವಡಿಸಲಿ. ಆಸ್ತಿ ಕಟ್ಟಡವಾಗಿದ್ದರೆ ಕಟ್ಟಡದ ಫೋಟೋವನ್ನೂ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಒತ್ತಾಯಿಸಿದರು.
2001-02ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆಗಳನ್ನು ಪಾಲಿಕೆ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ? ಹೀಗೆ ಇ-ಸ್ವತ್ತು ನಮೂನೆ ಸರಳೀಕರಿಸಿಕೊಂಡು, ಇ-ಆಸ್ತಿ ನಮೂನೆ-2 ನೀಡುವ ಕೆಲಸವನ್ನು ಪಾಲಿಕೆ ಮೊದಲು ಮಾಡಲಿ ಎಂದು ಅವರು ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಮೇಯರ್‌ಗಳಾದ ಕೆ.ಆರ್.ವಸಂತಕುಮಾರ, ಎಚ್.ಎನ್.ಗುರುನಾಥ, ಸುಧಾ ಜಯರುದ್ರೇಶ, ಎಂ.ಎಸ್. ವಿಠ್ಠಲ, ಎಚ್.ಎನ್.ಶಿವಕುಮಾರ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ಆವರಗೆರೆ ಸುರೇಶ, ಜ್ಯೋತಿ ಪಾಟೀಲ, ಎಂ.ಪಿ.ಕೃಷ್ಣಮೂರ್ತಿ ಪವಾರ್, ಬಿ.ಜಿ.ಸಿದ್ದೇಶ, ಶಿವರಾಜ ಪಾಟೀಲ, ಮುಕುಂದ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಆರ್. ಶಿವಾನಂದ, ಕೆ.ಎಂ.ವೀರೇಶ, ಲಿಂಗರಾಜು, ರಮೇಶ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ರಘು ಇತರರು ಇದ್ದರು.