ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಸದಸ್ಯರು । ೧೫ ದಿನದೊಳಗಾಗಿ ಬಾಕಿ ಉಳಿದ ಮುಕ್ತಾಯ ಪ್ರಮಾಣ ಪತ್ರ ನೀಡುವಂತೆ ಹೆಬ್ಬಾರ ತಾಕೀತು

ಕನ್ನಡಪ್ರಭ ವಾರ್ತೆ ಮುಂಡಗೋಡ

ಪಟ್ಟಣದಲ್ಲಿ ನಿರ್ಮಾಣವಾಗಿರುವ ಹಲವು ಕಟ್ಟಡಗಳಿಗೆ ಮುಕ್ತಾಯ ಪ್ರಮಾಣ ಪತ್ರ ವಿತರಣೆ ಮಾಡುವುದು ತೀವ್ರ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಎಂಜಿನಿಯರ್ ಇಲ್ಲ ಎಂಬ ಸಬೂಬು ನೀಡಲಾಗುತ್ತದೆ ಎಂದು ಪಪಂ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು.ಸೋಮವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಸದಸ್ಯರು, ಸುಮಾರು ೫೦ಕ್ಕೂ ಅಧಿಕ ಕಟ್ಟಡದ ಮುಕ್ತಾಯ ಪ್ರಮಾಣ ಪತ್ರ ನೀಡುವುದು ಬಾಕಿ ಇದ್ದು, ನಿತ್ಯ ಸಾರ್ವಜನಿಕರು ಕಛೇರಿಗೆ ಅಲೆದಾಡುವಂತಾಗಿದೆ. ಇಲ್ಲಿ ಖಾಯಂ ಎಂಜಿನಿಯರ್ ಇಲ್ಲ. ವಾರಕ್ಕೆ ಒಂದು ದಿನ ಎಂಜಿನಿಯರ್ ಬಂದು ಹೋಗುತ್ತಾರೆ. ಇದರಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ದೂರಿದರು.೧೫ ದಿನದೊಳಗಾಗಿ ಬಾಕಿ ಉಳಿದಿರುವ ಮುಕ್ತಾಯ ಪ್ರಮಾಣ ಪತ್ರ ನೀಡುವಂತೆ ಪಪಂ ಮುಖ್ಯಾಧಿಕಾರಿಗೆ ತಾಕೀತು ಮಾಡಿದ ಶಾಸಕ ಶಿವರಾಮ ಹೆಬ್ಬಾರ, ಅಗತ್ಯ ಎಂಜಿನಿಯರ್‌ಗಳು ಲಭ್ಯವಿಲ್ಲದ ಕಾರಣ ಈ ತೊಂದರೆಯಾಗುತ್ತಿದ್ದು, ಯಾರಾದರೂ ಎಂಜಿನಿಯರ್‌ಗಳು ಇಲ್ಲಿಗೆ ಬರುವವರು ಇದ್ದರೆ ತಕ್ಷಣ ನೇಮಿಸಲಾಗುವುದು ಎಂದು ಭರವಸೆ ನೀಡಿದರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಸಮರ್ಪಕ ಬಸ್ ವ್ಯವಸ್ಥೆ ಮಾಡುವಂತೆ ಮುಂಡಗೋಡ ಬಸ್ ಡಿಪೋ ಮ್ಯಾನೆಜರ್‌ಗೆ ಸೂಚಿಸಲಾಗಿದೆ. ಅಲ್ಲದೇ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆಗಾಲ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಈ ಸಂದರ್ಭ ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಳಕಲ್ಲಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ ಮುಂತಾದವರಿದ್ದರು.-----

೧ಎಮ್.ಎನ್.ಡಿ೧- ಮುಂಡಗೋಡದ ಪಪಂ ಸಭಾಂಗಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.