ನ್ಯಾಯ ವಿಳಂಬದಿಂದ ಗಲಭೆ, ಹತ್ಯೆ: ಪೇಜಾವರ ಶ್ರೀ

| Published : May 02 2025, 11:46 PM IST

ಸಾರಾಂಶ

ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆ ಹಾಗೂ ಮಂಗಳೂರಿನಲ್ಲಿ ನಡೆದಿರುವ ಹತ್ಯೆ ಖಂಡನೀಯ. ಜನರು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿದ್ದರಿಂದ ಪರಸ್ಪರ ಹೊಡೆದಾಟ, ಬಡಿದಾಡುವ ಪ್ರಸಂಗ ಎದುರಾಗಿದೆ.

ಗಂಗಾವತಿ:

ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದರಿಂದ ಹತ್ಯೆ, ಗಲಭೆಗಳು ನಡೆಯುತ್ತಿವೆ ಎಂಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳ ಹತ್ಯೆಗಳಿಗೆ ಸರ್ಕಾರಗಳು ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.

ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆ ಹಾಗೂ ಮಂಗಳೂರಿನಲ್ಲಿ ನಡೆದಿರುವ ಹತ್ಯೆ ಖಂಡನೀಯ. ಜನರು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿದ್ದರಿಂದ ಪರಸ್ಪರ ಹೊಡೆದಾಟ, ಬಡಿದಾಡುವ ಪ್ರಸಂಗ ಎದುರಾಗಿದೆ ಎಂದರು.

ಎಲ್ಲೋ ಒಂದು ಕಡೆ ಗಲಭೆ ನಡೆದರೆ ಅದಕ್ಕೆ ಪ್ರತೀಕಾರವಾಗಿ ಇನ್ನೊಂದೆಡೆ ಹತ್ಯೆ ನಡೆಯುತ್ತಿದೆ. ಇದು ದೇಶದ ಅರಾಜಕತೆಗೆ ಕಾರಣವಾಗಿದೆ ಎಂದ ಶ್ರೀಗಳು,

ಮಂಗಳೂರಿನಲ್ಲಿ ನಡೆದ ಹತ್ಯೆ, ಪೊಲೀಸ್ ಮಹಾನಿರ್ದೇಶಕರ ಓಂ ಪ್ರಕಾಶ ಕೊಲೆ, ಹುಬ್ಬಳ್ಳಿಯಲ್ಲಿ ಪುಟ್ಟ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಘಟನೆಗಳಿಂದ ನ್ಯಾಯಾಂಗದ ಮೇಲೆ ವಿಶ್ವಾಸವಿಲ್ಲದಂತೆ ಆಗಿದೆ. ನ್ಯಾಯಾಂಗದ ವಿಳಂಬ ನೀತಿಯಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಕಾನೂನು ಬದಲಾಗಲಿ:

ಗಲಭೆ, ಹತ್ಯೆಯಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಸಮಗ್ರವಾಗಿ ಕಾನೂನಿನಲ್ಲಿ ಬದಲಾವಣೆ ಆಗಬೇಕಿದೆ. ಈ ಕುರಿತು ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗ ಸೇರಿದಂತೆ ವಿವಿಧ ರಂಗಗಳಿಂದ ಸಮಗ್ರ ಚಿಂತನೆಗಳು ನಡೆಯಬೇಕಿದೆ ಎಂದ ಶ್ರೀಗಳು, ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಜೀವಿಸಲು ಶಾಂತಿ, ಸೌಹಾರ್ದತೆಯಿಂದ ಪ್ರತಿಯೊಬ್ಬರು ಬದುಕಬೇಕು ಎಂದರು.

ಸೈನಿಕರ ನಿರ್ಣಯಕ್ಕೆ ಬೆಂಬಲ:

ಪಹಲ್ಗಾಮ್‌ನಲ್ಲಿ ನಡೆದ 26 ಹಿಂದೂಗಳ ಹತ್ಯೆ ಖಂಡಿಸಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕು ಅಥವಾ ಬೇಡ ಎನ್ನುವುದನ್ನು ನಾವು ನಿರ್ಧರಿಸುವುದಲ್ಲ. ಸೈನಿಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಬೇಕು. ನೈತಿಕವಾಗಿ ಅವರನ್ನು ಕುಗ್ಗಿಸುವ ಕೆಲಸ ಮಾಡಬಾರದು ಎಂದ ಶ್ರೀಗಳು, ಮುಂದೆ ಪಹಲ್ಗಾಮ್‌ನಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು. ಹೊರಗಡೆ ಹಾಗೂ ಆಂತರಿಕವಾಗಿ ಯಾವುದೇ ಆಕ್ರಮಣಗಳು ನಡೆಯಬಾರದು. ಜನರು ಸ್ವತಂತ್ರವಾಗಿ ತಿರುಗಾಡುವ ವಾತಾವರಣ ಸೃಷ್ಟಿಯಾಗಬೇಕು. ಜನರಲ್ಲಿ ಭಯ ಉಂಟಾಗಬಾರದೆಂದರು.

ದೇಶದಲ್ಲಿ ಅಶಾಂತಿ ಮೂಡಿಸುವ ತಪ್ಪಿತಸ್ಥರ ವಿರುದ್ಧ ಶಿಕ್ಷಿಸುವುದು ಅನಿವಾರ್ಯವಾಗಿದೆ .ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದರು.

ನ್ಯಾಯ ಸಿಗಲಿ:

ಜಾತಿಗಣತಿ ಅದೊಂದು ಪ್ರಕ್ರಿಯೆಯಾಗಿದೆ. ಆದರೆ, ಏಕೆ ಮಾಡುತ್ತಿದ್ದಾರೆ, ಯಾವ ಕಾರಣಕ್ಕಾಗಿ ಮಾಡುತ್ತಾರೆ ಎನ್ನುವುದು ಮುಖ್ಯವಾಗಿದೆ. ಇದರ ಬಗ್ಗೆ ಅಧ್ಯಯನವಾಗಬೇಕು. ಇದು ಒಬ್ಬರ ನಿರ್ಣಯವಲ್ಲ. ಸಮಸ್ತ ಸರ್ವಜಾತಿಯವರ ನಿರ್ಣಯವಾಗಿದೆ. ಇದರಿಂದ ಎಲ್ಲರಿಗೆ ನ್ಯಾಯ ಸಿಕ್ಕರೆ ಸಾಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.