ಸಾರಾಂಶ
ಸಣ್ಣ ನೀರಾವರಿ ಇಲಾಖೆಯಿಂದ ಕುಷ್ಟಗಿ ತಾಲೂಕಿನ ೧೫ ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ವಿಳಂಬ ನೀತಿ ವಿರೋಧಿಸಿ ಆ. ೧೯ರಂದು ಹನುಮಸಾಗರದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಹೇಳಿದರು.
ಹನುಮಸಾಗರ: ಸಣ್ಣ ನೀರಾವರಿ ಇಲಾಖೆಯಿಂದ ಕುಷ್ಟಗಿ ತಾಲೂಕಿನ ೧೫ ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ವಿಳಂಬ ನೀತಿ ತೋರುತ್ತಿದ್ದು, ಶೀಘ್ರದಲ್ಲಿಯೇ ಕೆರೆ ತುಂಬಿಸುವ ಕಾಮಗಾರಿ ಪೂರ್ಣಗೊಳ್ಳಬೇಕು. ಒಂದು ವಾರದ ಗಡುವು ನೀಡಲಾಗುತ್ತಿದ್ದು, ಆ. ೧೯ರಂದು ಹನುಮಸಾಗರದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಹೇಳಿದರು.
ಇಲ್ಲಿಯ ಎಪಿಎಂಸಿ ಆವರಣದಲ್ಲಿ ನಡೆದ ಸಭೆಯ ಆನಂತರ ಅವರು ಈ ವಿಷಯ ತಿಳಿಸಿದರು. ರೈತರ ಹೊಲಗಳಿಗೆ ನೀರು ಹರಿಸುವುದು ಕೊಪ್ಪಳ ಏತ ನೀರಾವರಿ ಯೋಜನೆಯ ಮುಖ್ಯ ಉದ್ದೇಶ. ಆದರೆ ಹಲವಾರು ವರ್ಷಗಳು ಕಳೆದರೂ ನೀರಾವರಿ ಆಗುವ ಸಂಭವವೇ ಇಲ್ಲವೆನ್ನುವಂತಾಗಿದೆ. ಏತ ನೀರಾವರಿ ಗಂಭೀರ ವಿಚಾರ, ಬದುಕಿನ ಹೋರಾಟ, ಆದರೆ ಜನಪ್ರತಿನಿಧಿಗಳ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇದೆ. ಆದರೆ ಈಗ ಆಲಮಟ್ಟಿಯಿಂದ ಲಕ್ಷಾಂತರ ಕ್ಯುಸೆಕ್ ಹೊರಹರಿವು ಇರುವುದರಿಂದ ಪ್ರವಾಹದಿಂದ ಅಪಾರ ನಷ್ಟವಾಗುತ್ತಿದೆ. ಆ ನೀರನ್ನು ಕೆರೆಗಳಿಗೆ ಬಿಡುವ ಉದ್ದೇಶ ಹೊಂದಲಾಗಿದೆ.ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿ ರೈತರಿಗೆ ಸಾರ್ವಜನಿಕರಿಗೆ ಅನುಕೂಲವಾಗುವುದು. ಈ ಕೆರೆ ತುಂಬಿಸುವ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ ೧೫ ಕೆರೆಗಳಿಗೆ ನೀರು ಬಿಡುವ ಕಾಮಗಾರಿಗೆ ಟೆಂಡರ್ ಮೂಲಕ ೨೦೨೦ ಮಾರ್ಚ್‌ನಲ್ಲಿ ಗುತ್ತಿಗೆ ತೆಗೆದುಕೊಂಡಿದ್ದ ಗುತ್ತಿಗೆದಾರರು ೩ ವರ್ಷಗಳ ಕಾಲಾವಧಿಯಲ್ಲಿ ೨೦೨೩ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಕೊರೋನಾ ಇನ್ನಿತರ ಕಾರಣಗಳನ್ನೊಡ್ಡಿ ೨೦೨೪ರ ವರೆಗೆ ಕಾಲವಕಾಶ ನೀಡಲು ಕೋರಿದ್ದರು. ಆದರೆ ಈ ವರೆಗೂ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ಟೆಂಡರ್‌ನ ₹೪೯೮ ಕೋಟಿಗಳಲ್ಲಿ ಈಗಾಗಲೇ ₹೩೦೦ ಕೋಟಿಗಳಿಗೂ ಅಧಿಕ ಹಣ ಪಡೆದಿರುವುದು ಕೆಲವು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ವರೆಗೂ ರೈತರು, ಸಾರ್ವಜನಿಕರು ಸಾಕಷ್ಟು ಸಹನೆ ವಹಿಸಿದ್ದಾರೆ. ಸಿಡಿದೆದ್ದು, ರೊಚ್ಚಿಗೇಳುವ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು. ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಒಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿಯೇ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಆ. ೧೯ರಂದು ಹನುಮಸಾಗರದ ದ್ಯಾಮಾಂಬಿಕಾ ದೇವಸ್ಥಾನದ ಬಳಿ ಸೇರಿ ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು, ಮುತ್ತಿಗೆ ಹಾಕಿ, ಸಾಂಕೇತಿಕ ಹೋರಾಟ ಮಾಡಲಾಗುವುದು. ಅದಕ್ಕೂ ಮುಂಚೆ ಹನುಮಸಾಗರ ಹೋಬಳಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ, ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಹೋರಾಟ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಿಳಿಸಲಾಗುವುದು. ಅಂದು ನೀರಾವರಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು, ತಹಸೀಲ್ದಾರರು ಹಾಜರಿದ್ದು, ಸ್ಪಷ್ಟನೆ ಮತ್ತು ಆಶ್ವಾಸನೆ ಕೊಡಬೇಕು ಎಂದು ಅವರು ತಿಳಿಸಿದರು.ರೈತ ಸಂಘದ ಘಟಕ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಯಮನೂರಪ್ಪ ಮಡಿವಾಳರ, ಮುತ್ತಪ್ಪ ಹಲಕೂಲಿ, ಉಮೇಶ ಬಾಚಲಾಪುರ, ಬಸವರಾಜ ಮೋಟಗಿ, ಕರಿಸಿದ್ದಪ್ಪ ನಿಡಗುಂದಿ, ಮುತ್ತಣ್ಣ ಬೂದಿಹಾಳ, ಶಿವಪ್ಪ ಬಿಲಕಾರ, ದ್ಯಾಮಣ್ಣ ಗುರಿಕಾರ, ಮಹಾಂತೇಶ ಮದರಿ, ಯಲ್ಲಪ್ಪ ಗೋನಾಳ, ಇಸ್ಮಾಯಿಲ್‌ಸಾಬ್ ತಹಶೀಲ್ದಾರ, ಶಿವಕಾಂತಪ್ಪ ಹಾದಿಮನಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))