ಮಾರುಕಟ್ಟೆ ಕಾಮಗಾರಿ ವಿಳಂಬ, ವ್ಯಾಪಾರಸ್ಥರ ಅಸಮಾಧಾನ

| Published : Mar 27 2025, 01:03 AM IST

ಮಾರುಕಟ್ಟೆ ಕಾಮಗಾರಿ ವಿಳಂಬ, ವ್ಯಾಪಾರಸ್ಥರ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಿಪಲ್ಲೆ ಮಾರುಕಟ್ಟೆಯಲ್ಲಿ 130ಕ್ಕೂ ಹೆಚ್ಚು ತರಕಾರಿ ವರ್ತಕರಿಗೆ ಅನುಕೂಲವಾಗಲು ಪ್ರತ್ಯೇಕ ಅಂಗಡಿಗಳ ನಿರ್ಮಾಣದ ಸಂದರ್ಭದಲ್ಲಿ ನಕ್ಷೆಯನ್ನು ಪದೇ ಪದೇ ಬದಲಾವಣೆ ಮಾಡಿರುವ ಕಾರಣ ಕಾಮಗಾರಿ ಬಿಲ್ಲನ್ನು ಸರ್ಕಾರ ನೀಡುತ್ತಿಲ್ಲ

ಎಸ್.ಜಿ. ತೆಗ್ಗಿನಮನಿ ನರಗುಂದ

ನಗರೋತ್ಥಾನ ಯೋಜನೆಯಡಿ ಪಟ್ಟಣದಲ್ಲಿ ಕೈಗೊಂಡ ಕಾಯಿಪಲ್ಲೆ ಮಾರುಕಟ್ಟೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕಾಯಿಪಲ್ಲೆ ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ವಾರದ ಸಂತೆ ಪ್ರತಿ ಬುಧವಾರ ನಡೆಯುತ್ತದೆ. ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲ ಗ್ರಾಮಗಳು ಸೇರಿದಂತೆ ಸುತ್ತಲಿನ ತಾಲೂಕಿನ ಜನರು ಬುಧವಾರ ಸಂತೆಗೆ ಬರುವುದು ದಶಕಗಳಿಂದಲೂ ನಡೆದಿದೆ. ಮಾರುಕಟ್ಟೆಯ ವಿಳಂಬ ಕಾಮಗಾರಿಯಿಂದ ಅಲ್ಲಿಯ ಕಾಯಂ ತರಕಾರಿ ವ್ಯಾಪಾರಸ್ಥರು ಪಟ್ಟಣದ ಜವಳಿ ಬಜಾರ್, ಶ್ರೀರಾಮಪೇಠೆ ರಸ್ತೆ, ಸುಣದಗಸಿ ಸರ್ಕಲ್ ರಸ್ತೆ ಬದಿಯಲ್ಲಿ ತಮಗೆ ತಿಳಿದ ಹಾಗೆ ಗೂಡಂಗಡಿಗಳನ್ನು ಹಾಕಿಕೊಂಡು ತರಕಾರಿ ಮಾರುತ್ತಿದ್ದಾರೆ. ಅತಿಯಾದ ಜನದಟ್ಟಣೆಯಿಂದ ಜನರು ಸಂಚರಿಸಲು, ಸಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಅನುದಾನದ ಕೊರತೆ: ಕಾಯಿಪಲ್ಲೆ ಮಾರುಕಟ್ಟೆಯಲ್ಲಿ 130ಕ್ಕೂ ಹೆಚ್ಚು ತರಕಾರಿ ವರ್ತಕರಿಗೆ ಅನುಕೂಲವಾಗಲು ಪ್ರತ್ಯೇಕ ಅಂಗಡಿಗಳ ನಿರ್ಮಾಣದ ಸಂದರ್ಭದಲ್ಲಿ ನಕ್ಷೆಯನ್ನು ಪದೇ ಪದೇ ಬದಲಾವಣೆ ಮಾಡಿರುವ ಕಾರಣ ಕಾಮಗಾರಿ ಬಿಲ್ಲನ್ನು ಸರ್ಕಾರ ನೀಡುತ್ತಿಲ್ಲ. ಆರು ತಿಂಗಳೊಳಗೆ ಮುಗಿಯಬೇಕಾದ ಕಾಮಗಾರಿ ವರ್ಷ ಗತಿಸಲಿಕ್ಕೆ ಬಂದಿದೆ. ಅರ್ಧ ಕಾಮಗಾರಿಯೂ ಮುಗಿಯದೇ ಕುಂಟುತ್ತಲೇ ಸಾಗುತ್ತಿದೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ.

ಗ್ರಾಮೀಣ ರೈತರಿಗೆ ವ್ಯಾಪಾರಕ್ಕಾಗಿ ಸ್ಥಳ ಇಲ್ಲದಂತಾಗಿದೆ. ತರಕಾರಿ ವ್ಯಾಪಾರಿಗಳು ಬೇರೆ ಕಡೆ ದೊಡ್ಡ ಬಾಡಿಗೆಯನ್ನು ನೀಡಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಬೇಕಿದೆ. ಇದರಿಂದ ಬಂದ ಲಾಭ ಬಾಡಿಗೆ ನೀಡಬೇಕಿದೆ. ನಮ್ಮ ವ್ಯಾಪಾರ ಸುಗಮವಾಗಲು ಬೇಗನೆ ಮಳಿಗೆ ನಿರ್ಮಿಸಿಕೊಡಬೇಕೆಂದು ತರಕಾರಿ ವ್ಯಾಪಾರಸ್ಥರು ಆಗ್ರಹಿಸಿರುತ್ತಾರೆ.

ಮಾರುಕಟ್ಟೆ ಒಳಾವರಣದ ಸುತ್ತಲಿನ ವಾಣಿಜ್ಯ ಮಳಿಗೆಗಳಲ್ಲಿ ಕಿರಾಣಿ, ಹೇರ್ ಕಟಿಂಗ್ ಸಲೂನ್, ಸ್ಟೇಷನರಿ, ಮಸಾಲೆ ಸೇರಿದಂತೆ ಚಿಲ್ಲರೆ ವ್ಯಾಪಾರದ ಅಂಗಡಿಗಳಿವೆ. ತರಕಾರಿ ಖರೀದಿಸಲು ಬರುವ ಹಳ್ಳಿಗರು ಹಾಗೂ ಪಟ್ಟಣದ ಗ್ರಾಹಕರೇ ಇವರಿಗೆ ಆಧಾರವಾಗಿದ್ದಾರೆ. ಆದರೆ ಕಳೆದ ಎಂಟು ತಿಂಗಳುಗಳಿಂದ ಗ್ರಾಹಕರಿಲ್ಲದೇ ವ್ಯಾಪಾರ ಶೂನ್ಯವಾಗಿದೆ. ಆದರೆ ಪುರಸಭೆಗೆ ಮಳಿಗೆಯ ಬಾಡಿಗೆ ಕಟ್ಟುವುದು ನಿಂತಿಲ್ಲ. ಆದ್ದರಿಂದ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

ಪಟ್ಟಣದ ಅಭಿವೃದ್ಧಿಗಾಗಿ ಶಾಸಕ ಸಿ.ಸಿ. ಪಾಟೀಲವರ ಪ್ರಯತ್ನದ ಫಲವಾಗಿ 2024ರ ಏಪ್ರಿಲ್‌ನಲ್ಲಿ ನಗರೋತ್ಥಾನ ಯೋಜನೆಯಡಿ ರು. 2.20 ಕೋಟಿಯಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಪಟ್ಟಣದ ಮುಖ್ಯ ರಸ್ತೆಯ ಅಕ್ಕ ಪಕ್ಕವೆಲ್ಲ ತರಕಾರಿ ವ್ಯಾಪಾರ ಇದ್ದು, ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ತೀವ್ರ ಹರಸಾಹಸ ಪಡುತ್ತಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ವರ್ಷಕ್ಕೆ ಕೊಡುತ್ತಿದ್ದ ಬಾಡಿಗೆ ಹಣವನ್ನು ಈಗ ಫುಟ್ಪಾತ್‌ನಲ್ಲಿ ಅಂಗಡಿ ಹಾಕಿಕೊಂಡು ವರ್ಷದ ಬಾಡಿಗೆಯನ್ನು ತಿಂಗಳಿಗೆ ಕೊಡುತ್ತಿದ್ದೇವೆ. ತರಕಾರಿ ಸುರಕ್ಷಿತವಾಗಿಟ್ಟುಕೊಳ್ಳಲು ಲಕ್ಷಾಂತರ ರುಪಾಯಿಯಲ್ಲಿ ಬಾಡಿಗೆ ಅಂಗಡಿ ಪಡೆಯವಂತಾಗಿದೆ. ಬೇಗ ಕಾಮಗಾರಿ ಮುಗಿಸಬೇಕೆಂದು ಹಲವು ಬಾರಿ ಒತ್ತಾಯಿಸಿದ್ದೇವೆ. ಆದರೆ ಗುತ್ತಿಗೆದಾರನು ಬಿಲ್‌ ಆದ ಮೇಲೆ ಕಾಮಗಾರಿ ಪ್ರಾರಂಭಿಸುತ್ತೇನೆ ಎನ್ನುತ್ತಿದ್ದಾರೆ. ಆದ್ದರಿಂದ ವಿಳಂಬ ಮಾಡದೇ ಕೂಡಲೇ ತರಕಾರಿ ಮಾರುಕಟ್ಟೆ ಕಾಮಗಾರಿ ಪೂರ್ಣ ಗೊಳಿಸಬೇಕೆಂದು ತರಕಾರಿ ವ್ಯಾಪಾರಿ ಅನೀಲ ಕಲಾಲ ಹೇಳಿದರು.

ನಗರೋತ್ಥಾನ ಯೋಜನೆಯಡಿ ರು. 2.20 ಕೋಟಿಯಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ನಕ್ಷೆ ಬದಲಾವಣೆ ಪರಿಣಾಮ ಹಾಗೂ ಬಿಲ್ಲ ಇನ್ನೂ ಆಗದ ಕಾರಣ ಕಾಮಗಾರಿ ವಿಳಂಬವಾಗಿದೆ. ಎಪ್ರಿಲ್ ಅಂತ್ಯದೊಳಗೆ ತರಕಾರಿ ಮಾರುಕಟ್ಟೆ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದರಿ ಹೇಳಿದ್ದಾರೆ.