ಸತ್ತ ಹಸು ಮರಣೋತ್ತರ ಪರೀಕ್ಷೆ ವಿಳಂಬ: ದೂರು

| Published : May 15 2024, 01:32 AM IST

ಸಾರಾಂಶ

ಹಸು ಶವವನ್ನು ಮರಣೋತ್ತರ ಪರೀಕ್ಷೆ ಮಾಡಲು ನಿರಾಕರಿಸಿದ್ದರಿಂದ ಸಚಿವರಿಗೆ ದೂರು ಸಲ್ಲಿಕೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಳೆದ ಶನಿವಾರ ಕಾಡು ಪ್ರಾಣಿಯ ದಾಳಿಗೆ ಸಾವಿಗೀಡಾದ ಹಸುವೊಂದನ್ನು ಮರಣೋತ್ತರ ಪರೀಕ್ಷೆಗೆ ಆಗಮಿಸುವಂತೆ ಮನವಿ ಮಾಡಿದ ರೈತ ಸಂಘದ ಕಾರ್ಯಕರ್ತರಿಗೆ ನಾನು ರಜೆಯಲ್ಲಿದ್ದೇನೆ ಬರಲು ಆಗಲ್ಲ ಎಂಬ ಸಬೂಬು ಹೇಳುವ ಮೂಲಕ ಕರ್ತವ್ಯಲೋಪ ಎಸಗಿದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ವಿರುದ್ಧ ಕರ್ತವ್ಯಲೋಪದಡಿ ಕ್ರಮಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಆಗ್ರಹಿಸಿದ್ದು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.

ಶನಿವಾರ ಸಾವಿಗೀಡಾದ ಹಸುವಿನ ಮರಣೋತ್ತರ ಪರೀಕ್ಷೆಗೆ ಸಹಾಯಕ ನಿರ್ದೇಶಕರು ಬಾರದೆ ಉಡಾಫೆ ಮಾತುಗಳನ್ನಾಡಿ ನಾನು ರಜೆ ಬರಲು ಆಗಲ್ಲ ಎಂದರು. ನಮ್ಮ ಸಿಬ್ಬಂದಿಯನ್ನಾದರು ಕಳುಹಿಸುವೆ ಎಂದು ಸೌಜನ್ಯಕ್ಕೂ ಉತ್ತರ ನೀಡಲಿಲ್ಲ, ಈ ಹಿನ್ನೆಲೆ ವಿಚಾರ ಎಸಿ ಶಿವಮೂರ್ತಿ ಅವರ ಗಮನಕ್ಕೆ ತಂದ ಬಳಿಕ ಈ ಪ್ರಕರಣ ಸುಖಾಂತ್ಯಗೊಂಡಿದೆ ಎನ್ನಲಾಗಿದೆ.

ಶನಿವಾರ ಕಾಡು ಪ್ರಾಣಿಯ ದಾಳಿಗೆ ತುತ್ತಾದ ಹಸುವನ್ನು ವೀಕ್ಷಿಸಿದ ಅರಣ್ಯಾಧಿಕಾರಿಗಳು ಪರಿಹಾರ ನೀಡುವ ಭರವಸೆ ನೀಡಿದ್ದು, ಕೂಡಲೆ ಮರಣೋತ್ತರ ಪರೀಕ್ಷೆ ನಡೆಸಿ ಎಂಬ ಸೂಚನೆ ಹಿನ್ನೆಲೆ ರೈತ ಮುತ್ತುವಿನ ಪರವಾಗಿ ನಿಂತ ರೈತ ಸಂಘದ ಶೈಲೇಂದ್ರ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ, ಈ ಹಿನ್ನೆಲೆ ವಿಚಾರವನ್ನು ಎಸಿ ಗಮನಕ್ಕೆ ತಂದು ಡಾ. ಶಿವಕುಮಾರ್ ಅವರನ್ನು ಸಹಾಯಕ ನಿರ್ದೇಶಕರು ಭಾನುವಾರ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಹಿನ್ನೆಲೆ ಉಡಾಫೆಯ ಮಾತುಗಳನ್ನಾಡಿ ಸ್ಪಂದಿಸದ ಸಹಾಯಕ ನಿರ್ದೇಶಕ ಮುತ್ತುರಾಜು ಮೇಲೆ ಕ್ರಮಕೈಗೊಳ್ಳಬೇ ಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.

ಜಾಗೇರಿಯಲ್ಲೊಂದು ಕರ್ತವ್ಯಲೋಪ ಬೆಳಕಿಗೆ:

ಜಾಗೇರಿಯ ಸೆಲುವೈಪುರದ ರೈತ ರಾಯಪ್ಪ ಎಂಬುವರಿಗೆ ಸೇರಿದ ಹಸು ಗರ್ಭಿಣಿಯಾಗಿದ್ದು ಪ್ರಸವದ ವೇಳೆ ನಿತ್ರಾಣಗೊಂಡಿದೆ. ಹಸುವಿನ ಹೊಟ್ಟೆಯೊಳಗೆ ಕರು ಸತ್ತ ಹಿನ್ನೆಲೆ ಹಸು ಸಹಾ ನಿತ್ರಾಣಗೊಂಡಿದ್ದು ಈ ಸಂಬಂಧ ಸ್ಪಂದಿಸಿ ಎಂದು ಶೈಲೇಂದ್ರ ಸಹಾಯಕ ನಿರ್ದೇಶಕ ಮುತ್ತರಾಜುಗೆ ಕರೆ ಮಾಡಿದ್ದಾರೆ. ಈ ವೇಳೆಯೂ ಸಹಾ ಸಬೂಬು ಹೇಳಿದ ಸಹಾಯಕ ನಿರ್ದೇಶಕರು, ನಾನು ರಜೆ ಎಂದಿದ್ದಾರೆ. ಬಳಿಕ ಸಿಬ್ಬಂದಿಗೆ ಕರೆ ಮಾಡಿದ ಹಿನ್ನೆಲೆ ಯಳಂದೂರು ಭಾಗಕ್ಕೆ ಕರೆ ಮಾಡಿ ಅಲ್ಲಿಂದ ಅಧಿಕಾರಿಗಳು ಬರುತ್ತಾರೆ ಎನ್ನುತ್ತಾರೆ, ಬಳಿಕ ಯಳಂದೂರು ಅಧಿಕಾರಿಗಳಿಗೆ ಕರೆ ಮಾಡಿದ ಹಿನ್ನೆಲೆ ಅವರು ಸ್ಥಳಕ್ಕೆ ಆಗಮಿಸಿ ಹಸು ಹೆರಿಗೆ ಮಾಡಿಸುವ ನಿಟ್ಟಿನಲ್ಲಿ ಸ್ಪಂದಿಸಿ ಹೊಟ್ಟೆಯೊಳಗೆ ಸತ್ತ ಕರುವನ್ನು ಬೇರ್ಪಡಿಸಿ ಹಸುವಿಗೆ ಚಿಕಿತ್ಸೆ ನೀಡಿ ತೆರಳುತ್ತಾರೆ.

ಬಳಿಕ ಹಸು ಪುನಃ ನಿತ್ರಾಣಗೊಂಡ ಹಿನ್ನೆಲೆ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿದರೂ ಸಹಾ ಸ್ಪಂದಿಸದ ಹಿನ್ನೆಲೆ ರಾಯಪ್ಪ ಅವರ ಹಸು ಸಾವಿಗೀಡಾಯಿತು. ಈ ಹಿನ್ನೆಲೆ ಸಹಾಯಕ ನಿರ್ದೇಶಕರಿಂದಲೆ ಕರ್ತವ್ಯಲೋಪವಾಗಿದೆ. ಕರೆ ಮಾಡಿದ ವೇಳೆ ಇನ್ನಿತರೆ ಅಧಿಕಾರಿಗಳನ್ನು ಕಳುಹಿಸಿ ಸ್ಪಂದಿಸಬಹುದಿತ್ತು, ಈ ಕಾರಣಗಳಿಗಾಗಿ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.