- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕೇಂದ್ರ ಸಚಿವ ಎಚ್ಡಿಕೆ ಪತ್ರ
- ಇವಿ ಟೆಸ್ಟಿಂಗ್ ಕೇಂದ್ರ ಮತ್ತು ಸಿಐಇ ಕೇಂದ್ರದ ಒಲವು- ಬಸರಾಳುವಿನಲ್ಲಿ ೧೦೦ ಎಕರೆ ಜಾಗ ಮಂಜೂರಿಗೆ ಎಆರ್ಎಐ ಕೋರಿಕೆ
- ೧೦ ತಿಂಗಳಿಂದ ಭೂಮಿ ಕೊಡದೆ ಸತಾಯಿಸುತ್ತಿರುವ ರಾಜ್ಯಸರ್ಕಾರಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪಿಸಲು ಕಳೆದ ಹತ್ತು ತಿಂಗಳಿನಿಂದ ಭೂಮಿ ಮಂಜೂರಾತಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ಗುರುವಾರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಈವರೆಗೆ ಕೈಗಾರಿಕೆ ಸ್ಥಾಪನೆ ಕುರಿತಂತೆ ನಡೆದಿರುವ ಸಭೆಗಳು, ಕೇಂದ್ರ ಮತ್ತು ರಾಜ್ಯದ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಲಗತ್ತಿಸಿ ಮುಖ್ಯಮಂತ್ರಿ ಕಚೇರಿಗೆ ಪತ್ರವನ್ನು ಕಳಿಸಿದ್ದಾರೆ. ಪತ್ರ ಜೊತೆಗೆ ಆ ಎಲ್ಲಾ ದಾಖಲೆಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಅಲ್ಲದೇ, ಮಂಡ್ಯದಲ್ಲಿ ಎಆರ್ಎಐ ಕೇಂದ್ರ ಸ್ಥಾಪನೆ ಕುರಿತಂತೆ ಕೋರಲಾಗಿರುವ ಭೂ ಮಂಜೂರಾತಿಗೆ ಸಂಬಂಧಿಸಿದ ಮುಖ್ಯಮಂತ್ರಿ ಡಿಕೆಶಿ ಅವರು ನೀಡಿರುವ ಹೇಳಿಕೆಗಳ ಪತ್ರಿಕಾ ತುಣುಕುಗಳನ್ನು ಕೂಡ ಪತ್ರಕ್ಕೆ ಲಗತ್ತಿಸಿ ಕೇಂದ್ರ ಸಚಿವರು ರವಾನಿಸಿದ್ದಾರೆ.
ಮಹತ್ವದ ಈ ಪತ್ರವನ್ನು ಕೇಂದ್ರ ಸಚಿವರ ಆಪ್ತರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ. ಪತ್ರ ತಲುಪಿದ ನಂತರ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರು ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದರು.ಸಚಿವರ ಪತ್ರದ ಸಾರಾಂಶ ಹೀಗಿದೆ:
‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಪ್ರಸ್ತಾಪಿಸಲಾಗಿರುವ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರ ಕಳೆದ ೧೦ ತಿಂಗಳಿನಿಂದ ವಿಳಂಬ ಮಾಡುತ್ತಿದೆ.ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಇಷ್ಟೆಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸೂಕ್ತ ಭೂಮಿಯನ್ನು ಮಂಜೂರು ಮಾಡುವ ವಿಷಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಜಾಗ ಮಂಜೂರಿಗೆ ಕೋರಿಕೆ:ಸೆ.೧೬ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಆರ್ಎಐ ಸಂಸ್ಥೆಯು ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಈ ಸಭೆಯಲ್ಲಿ ಬಸರಾಳು ಮತ್ತು ಎಲೆಚಾಕನಹಳ್ಳಿಯ ಜಾಗಗಳ ಸೂಕ್ತತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಬಸರಾಳಿನಲ್ಲಿರುವ ಸುಮಾರು ೧೦೦ ಎಕರೆ ಜಾಗ ರಸ್ತೆ ಸಂಪರ್ಕ ಸುಧಾರಣೆಗೆ ಒಳಪಟ್ಟು ಸಿಐಇ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಬಹುದು ಎಂದು ತೀರ್ಮಾನಿಸಲಾಯಿತು.
ಎಲೆಚಾಕನಹಳ್ಳಿಯಲ್ಲಿ ಅಡಚಣೆ:ಆದರೆ ’ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ ಕ್ಕೆ ಹೆಚ್ಚುವರಿಯಾಗಿ ೬೦ ಎಕರೆ ಭೂಮಿ ಅಗತ್ಯವಿದ್ದು, ಎರಡೂ ಸೌಲಭ್ಯಗಳನ್ನು ಒಟ್ಟಾಗಿ ಸ್ಥಾಪಿಸಲು ಎಲೆಚಾಕನಹಳ್ಳಿ ಭೂಮಿಯನ್ನು ಸಹ ಪರ್ಯಾಯ ಸ್ಥಳವಾಗಿ ಪರಿಶೀಲಿಸಲಾಯಿತು. ಇಲ್ಲಿ ದೀರ್ಘವಾದ ಪರೀಕ್ಷಾ ಹಾದಿ ಮತ್ತು ಪಕ್ಕದಲ್ಲೇ ಕೈಗಾರಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸುವ ಅವಕಾಶವಿತ್ತು. ಆದಾಗ್ಯೂ ಈ ಆಯ್ಕೆಯು ಮುಖ್ಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು (ಮೈಸೂರು-ಬೆಂಗಳೂರು ಹೆದ್ದಾರಿಯಿಂದ ಸಂಪರ್ಕ ಮತ್ತು ರೈಲ್ವೆ ಮೇಲುಸೇತುವೆ ನಿರ್ಮಾಣ) ಮುಂತಾದ ಸವಾಲುಗಳನ್ನು ಹಾಗೂ ಅಡಚಣೆಗಳನ್ನು ಒಳಗೊಂಡಿರುವುದು ತಿಳಿದುಬಂದಿದೆ.
೧೦೦ ಎಕರೆ ಭೂಮಿ ನೀಡಲು ಕಾಲಹರಣ:ಸೆ.೨೮ರಂದು ಎಆರ್ಎಐ ಸಂಸ್ಥೆಯು ತನ್ನ ಮನವಿಯನ್ನು ಪರಿಷ್ಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಆ ಪತ್ರದಲ್ಲಿ ಬಸರಾಳುವಿನಲ್ಲಿ ಸಿಐಇ ಸೌಲಭ್ಯಕ್ಕಾಗಿ ಸುಮಾರು ೧೦೦ ಎಕರೆ ಭೂಮಿ ಮತ್ತು ’ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ ಸೌಲಭ್ಯಕ್ಕಾಗಿ ೬೦ ಎಕರೆ ಭೂಮಿಯನ್ನು ಗುರುತಿಸುವಂತೆ ಕೋರಲಾಯಿತು. ಈ ಪರಿಷ್ಕೃತ ಪ್ರಸ್ತಾವನೆಯು ’ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ಕ್ಕೆ ಅಗತ್ಯವಿರುವ ಹೆಚ್ಚುವರಿ ೬೦ ಎಕರೆ ಭೂಮಿಯ ವಿಷಯವನ್ನು ಬಗೆಹರಿಸಿಕೊಳ್ಳುವಾಗಲೇ ಸಿಐಇ ಸೌಲಭ್ಯದ ಕೆಲಸವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇಷ್ಟೆಲ್ಲಾ ಪ್ರಯತ್ನಗಳು ಮತ್ತು ಕಾರ್ಯಸಾಧ್ಯವಾದ ಕ್ರಮಗಳ ಗುರುತಿಸುವಿಕೆ ಹೊರತಾಗಿಯೂ ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತದಿಂದ ಭೂಮಿ ಮಂಜೂರಾತಿ ಆಗದೇ ಇನ್ನೂ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಚಾಲಿತ ವಾಹನ ವ್ಯವಸ್ಥೆಗೆ ಬಲಸಿಐಇ ಮತ್ತು ಇವಿ ಪರೀಕ್ಷಾ ಕೇಂದ್ರಗಳು ಭಾರತದ ವಾಹನ ಮತ್ತು ವಿದ್ಯುತ್ ಚಾಲಿತ ವಾಹನ ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತವೆ, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ ಹಾಗೂ ಈ ಪ್ರದೇಶದಲ್ಲಿ ಪೂರಕ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇವು ಕರ್ನಾಟಕದಲ್ಲಿ ಸುಧಾರಿತ ಪರೀಕ್ಷೆ, ಮೌಲ್ಯಮಾಪನ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ.
ಎಆರ್ಎಐ ಸಂಸ್ಥೆ ವಾಹನ ಮೌಲ್ಯಮಾಪನ, ಇಂಗಾಲ ಹೊರಸೂಸುವಿಕೆ ವಾಹನ ಸುರಕ್ಷತೆ, ಎಂಜಿನ್ ಅಭಿವೃದ್ಧಿ, ರಚನಾತ್ಮಕ ಚಲನಶೀಲತೆ, ವಾಹನ ಎಲೆಕ್ಟ್ರಾನಿಕ್ಸ್, ಪ್ರಮಾಣೀಕರಣ ಮತ್ತು ಇತರ ವಿಶೇಷ ಕ್ಷೇತ್ರಗಳಲ್ಲಿ ವ್ಯಾಪಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ.ಆಟೋಮೊಬೈಲ್ನಲ್ಲಿ ಕರ್ನಾಟಕ ಮುಂಚೂಣಿಗೆರಾಷ್ಟ್ರದಲ್ಲಿ ಇಂತಹ ಕೇಂದ್ರಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಮಹಾರಾಷ್ಟ್ರದ ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ, ಹರಿಯಾಣದ ಮಾನೇರ್ಸನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರ, ಚೆನ್ನೈನಲ್ಲಿರುವ ಗ್ಲೋಬಲ್ ಆಟೋಮ್ಯಾಟಿವ್ ರಿಸರ್ಚ್ ಸೆಂಟರ್, ಕಾಶ್ಮೀರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ ಸಂಸ್ಥೆಗಳು ರಾಷ್ಟ್ರದಲ್ಲಿದ್ದು, ಈ ಕೇಂದ್ರಗಳ ಕೊಡುಗೆಯಿಂದ ಇಂದು ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಾಗಿ ಬೆಳೆದಿವೆ. ಹೀಗಾಗಿ ಇಂತಹ ಪ್ರತಿಷ್ಠಿತ ಕೇಂದ್ರಗಳು ನಮ್ಮ ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿದೆ. ಯಾವುದೇ ಕಾರಣಕ್ಕೂ ಎಆರ್ಎಐ ಪರೀಕ್ಷಾ ಕೇಂದ್ರವನ್ನು ಕರ್ನಾಟಕ ಕಳೆದುಕೊಳ್ಳಬಾರದು ಎನ್ನುವುದು ನನ್ನ ಆಶಯವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯಲ್ಲಿ ಎಆರ್ಎಐ ಕೇಂದ್ರಕ್ಕೆ ಅಗತ್ಯವಿರುವ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕೆಂದು ಪತ್ರದ ಮೂಲಕ ಕೋರಿದ್ದಾರೆ.