ಪಟ್ಟಣ ಪಂಚಾಯ್ತಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬ: ದೂರು

| Published : Feb 07 2024, 01:52 AM IST

ಸಾರಾಂಶ

ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರ ದೂರಿನ ಮೇರೆಗೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತಗಳನ್ನ ಪರಿಶೀಲನೆ ನಡೆಸಿದರು.

ಕೊರಟಗೆರೆ: ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರ ದೂರಿನ ಮೇರೆಗೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತಗಳನ್ನ ಪರಿಶೀಲನೆ ನಡೆಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸಗಳಿಗೆ ಆಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಪಪಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು. ಅಧಿಕಾರಿಗಳು ಕಚೇರಿಯಲ್ಲಿ ಕಾಲಹರಣ ಮಾಡಿಕೊಂಡು ಸಾರ್ವಜನಿಕರ ಕೆಲಸಗಳು ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ಸಾರ್ವಜನಿಕರು ಪ್ರತಿನಿತ್ಯ ಕಚೇರಿಗೆ ಅಲೆದು ಅಲೆದು ಸಾಕಾಗಿ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಗೆ ಲಿಖಿತ ಮೂಲಕ ದೂರು ಸಲ್ಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಲೋಕಾಯುಕ್ತ ಅಧಿಕಾರಿಗಳು ಕೊರಟಗೆರೆ ಪಪಂಗೆ ದಿಢೀರ್ ಭೇಟಿ ನೀಡಿ ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ರಾಮರೆಡ್ಡಿ ಕಡತಗಳನ್ನ ಪರಿಶೀಲಿಸಿದರು.

ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೂ ೩ ಜನ ಲೋಕಾಯುಕ್ತ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಕೆಲಸಗಳನ್ನ ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿದ್ದು ಅವುಗಳನ್ನ ತ್ವರಿತವಾಗಿ ಸಾರ್ವಜನಿಕರ ಕೆಲಸಗಳು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ನಿವಾಸಿ ಉಮೇಶ್ ಮಾತನಾಡಿ, ೨೦೧೮ರಲ್ಲಿ ಸಾರ್ವಜನಿಕರ ರಸ್ತೆ ಒತ್ತುವರಿಯನ್ನ ತೆರವುಗೊಳಿಸುವಂತೆ ಪಪಂ ಅಧಿಕಾರಿಗಳಿಗೆ ತೀಲಿಸದರೂ ಯಾವುದೇ ಪ್ರಯೋಜನವಾಗಿಲ್ಲ. ೨೦೧೩ರಲ್ಲಿ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ತೆರವುಗೊಳಿಸಿ ಕೊಟ್ಟಿದ್ದರು. ಪಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.