ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಸಭೆ ನಿರ್ಣಯಗಳನ್ನು ಜಾರಿಗೊಳಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಎರಡು ವರ್ಷಗಳಿಂದ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನುಶಿವರಾಮನ್‌ ಮತ್ತು ಕೆ.ಎಸ್‌. ಭರತ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಧುಗಿರಿ, ಕೊರಟಗೆರೆ, ಶಿರಾ, ತುಮಕೂರು ಮತ್ತು ತುರುವೆಕೆರೆ ಸೇರಿ ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಡ ಮತ್ತು ವಸತಿ ರಹಿತರಿಗೆ ಮನೆ, ನಿವೇಶನ, ಹಕ್ಕು ಪತ್ರ, ಸಾಗುವಳಿ ಚೀಟಿ, ಖಾತೆ ಹಂಚಲು ಮತ್ತು ಕುಡಿಯುವ ನೀರು ಸೇರಿ ಅಗತ್ಯ ಸೇವೆ ಕಲ್ಪಿಸಲು 2024ರ ಜೂ.25ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಭೂಮಿ ಮತ್ತು ವಸತಿ ಸಮಿತಿ ಸಭೆ ಕೈಗೊಂಡ ನಿರ್ಣಯದನ್ವಯ ಕೈಗೊಂಡ ಕ್ರಮಗಳ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಸಭೆ ನಿರ್ಣಯಗಳನ್ನು ಜಾರಿಗೊಳಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಎರಡು ವರ್ಷಗಳಿಂದ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನುಶಿವರಾಮನ್‌ ಮತ್ತು ಕೆ.ಎಸ್‌. ಭರತ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣದ ಕುರಿತು ವಸ್ತುಸ್ಥಿತಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಕೋರಿದರು.

ವಸ್ತುಸ್ಥಿತಿ ವರದಿ ಸಲ್ಲಿಸಲು ನಿರ್ದೇಶನ:

ಆಗ ಅರ್ಜಿ ಸಂಬಂಧ ಈ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶಗಳನ್ನು ಪರಿಶೀಲಿಸಿದ ವಿಭಾಗೀಯ ಪೀಠ, ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಅವರ ಅಧ್ಯಕ್ಷತೆಯ ಜಿಲ್ಲಾ ಭೂಮಿ ಮತ್ತು ವಸತಿ ಸಮಿತಿಯ ಸಭೆ ಕೈಗೊಂಡ ನಿರ್ಣಯ ಜಾರಿ ಸಂಬಂಧ ಸದ್ಯದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ 2025ರ ಅ.30ರಂದು ನ್ಯಾಯಾಲಯ ನಿರ್ದೇಶಿಸಿದೆ.‌ ಒಂದು ವರ್ಷ ಆಗುತ್ತಾ ಬಂದರೂ ಸರ್ಕಾರಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿಲ್ಲ. 2026ರ ಏ.17ರಂದು ಸಹ ಕಾಲಾವಕಾಶ ನೀಡಿ, ಜುಲೈ 7ರೊಳಗೆ ವಸ್ತುಸ್ಥಿತಿ ಸಲ್ಲಿಸದೇ ಹೋದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಸೆ.28ರಂದು ಸಹ ಕಾಲಾವಕಾಶ ಪಡೆಯಲಾಗಿದೆ. ಹೀಗಿದ್ದರೂ ಕೋರ್ಟ್ ಆದೇಶವನ್ನು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇಷ್ಟೊಂದು ವಿಳಂಬ ಯಾಕೆ ಮಾಡಲಾಗಿದೆ. ಕೋರ್ಟ್ ಆದೇಶವೆಂದರೆ ಸರ್ಕಾರಕ್ಕೆ ತಮಾಷೆಯೇ? ದೊಡ್ಡ ಮೊತ್ತ ದಂಡ ವಿಧಿಸಲು ಇದು ಅರ್ಹ ಪ್ರಕರಣವಾಗಿದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿತು.

ಸರ್ಕಾರಿ ವಕೀಲರು, ಕೆಲ ದಾಖಲೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ವಸ್ತುಸ್ಥಿತಿ ವರದಿ ಸಲ್ಲಿಸಲು ವಿಳಂಬವಾಗಿದೆ. ಸಂಬಂಧಪಟ್ಟ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಾಜರಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಉಪ ವಿಭಾಗಾಧಿಕಾರಿಗಳನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಕೋರ್ಟ್‌ ಆದೇಶದ ಅನುಪಾಲನೆ ಮಾಡಲು ಸರ್ಕಾರಕ್ಕೆ ಏನು ಕಷ್ಟವಾಗುತ್ತಿದೆ. ಕೋರ್ಟ್‌ ಆದೇಶವನ್ನು ಹಗುರವಾಗಿ ಪರಿಗಣಿಸುತ್ತಿದ್ದೀರಾ? ಕೋರ್ಟ್‌ ಆದೇಶವನ್ನು ಲಘುವಾಗಿ ಭಾವಿಸಿದರೆ, ಕಠಿಣ ಆದೇಶ ಆದೇಶ ಹೊರಡಿಸಬೇಕಾಗುತ್ತದೆ. ಜಿಲ್ಲಾಧಿಕಾರಿ ಹಾಜರಾತಿಗೆ ಸೂಚಿಸಿದರೆ, ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಕೋರ್ಟ್‌ ಸೂಚಿಸಿದ ಅಧಿಕಾರಿಯೇ ಹಾಜರಾಗಬೇಕೇ ಹೊರತು ಮತ್ಯಾರೋ ಅಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

ಅಂತಿಮವಾಗಿ ನ್ಯಾಯಾಲಯದ ಆದೇಶ ಅನುಪಾಲನೆ ಮಾಡುವಲ್ಲಿ ಏಕೆ ವಿಳಂಬವಾಗಿದೆ ಎಂಬ ಬಗ್ಗೆ ಕಾರಣ ತಿಳಿಸಿ ಪ್ರಮಾಣ ಪತ್ರ ಸಲ್ಲಿಸಬೇಕು. ಎರಡು ವಾರಗಳಲ್ಲಿ 2025ರ ಅ.30ರ ನಿರ್ದೇಶನದಂತೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿ ಅರ್ಜಿ ವಿಚಾರಣೆಯನ್ನು ಅ.15ಕ್ಕೆ ಮುಂದೂಡಿತು.