ವಿಬಿ-ಜಿ -ರಾಮ್‌ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ರಾಜ್ಯದ 350 ಗ್ರಾಮ ಪಂಚಾಯತ್‌ಗಳಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೀದರ್‌: ವಿಬಿ-ಜಿ -ರಾಮ್‌ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ರಾಜ್ಯದ 350 ಗ್ರಾಮ ಪಂಚಾಯತ್‌ಗಳಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ವೇತನ ವಿತರಣೆಯಲ್ಲಿ ಕೆಲ ಬದಲಾವಣೆ ಹಾಗೂ ಸಾಫ್ಟವೇರ್‌ ಬದಲಾವಣೆ ಅಲ್ಲದೇ ತಾಂತ್ರಿಕ ಸಮಸ್ಯೆಯೇ ವೇತನ ವಿಳಂಬಕ್ಕೆ ಕಾರಣವಾಗಿದೆ, ಅದಾಗ್ಯೂ ವಿಳಂಬವನ್ನು ಸಹಿಸೋಲ್ಲ ಎಂದ ಅವರು, ಬೀದರ್‌ ಜಿಲ್ಲೆಯಲ್ಲಿ ಪ್ರತಿ ದಿನ 30 ಸಾವಿರ ಜನ ಈ ಯೋಜನೆಯಡಿ ಕೆಲಸ ಮಾಡುತ್ತಿದ್ದರೆ, ರಾಜ್ಯದಲ್ಲಿ ನಿತ್ಯ 2.50 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದೆ. ತಾವು ಇಲಾಖೆ ಸಚಿವನಾಗಿ 90 ದಿನಗಳಲ್ಲಿ ಸುಮಾರು 2900 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಅನೇಕ ಜನರಿಗೆ ಹೊಸ ಜಾಬ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 25 ಜನ ರೈತರನ್ನು ಆಯ್ಕೆ ಮಾಡಿ ಅವರಿಗೆ ವೈಯಕ್ತಿಕ ಕಾಮಗಾರಿ ನೀಡಬೇಕು. ಕೂಲಿ ಕಾರ್ಮಿಕರಿಗೆ ಕಾನೂನಿನಂತೆ 15 ದಿನದಲ್ಲಿ ಅವರಿಗೆ ವೇತನ ಪಾವತಿಸಬೇಕು ಎಂದು ಸೂಚಿಸಲಾಗಿದೆ ಎಂದರು.