ಇಂದು ಸಿಎಂ, ಡಿಸಿಎಂ ಬಳಿಗೆ ನಿಯೋಗ

| Published : Jun 25 2025, 01:18 AM IST

ಸಾರಾಂಶ

ಭದ್ರಾ ಜಲಾಶಯದ ಹಿನ್ನೀರಿನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರು ಒಯ್ಯಬೇಕೆಂದು ಹಿಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನೇ ಧಿಕ್ಕರಿಸಿ, ಈಗಿನ ಕಾಂಗ್ರೆಸ್ ಸರ್ಕಾರ ಮನಬಂದಂತೆ ಡ್ಯಾಂನ ನಿಷೇಧಿತ ಪ್ರದೇಶದಲ್ಲಿ ಬಲದಂಡೆ ನಾಲೆ ಸೀಳುವ ಕಾಮಗಾರಿ ಕೈಗೊಂಡಿದೆ. ಈ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು. ಬೇಡಿಕೆಗೆ ಮಣಿಯದಿದ್ದರೆ ಕಾನೂನು ಹೋರಾಟಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಎಚ್ಚರಿಸಿದ್ದಾರೆ.

- ಡ್ಯಾಂ ಬಳಿ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು: ಶಾಸಕ ಹರೀಶ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭದ್ರಾ ಜಲಾಶಯದ ಹಿನ್ನೀರಿನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರು ಒಯ್ಯಬೇಕೆಂದು ಹಿಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನೇ ಧಿಕ್ಕರಿಸಿ, ಈಗಿನ ಕಾಂಗ್ರೆಸ್ ಸರ್ಕಾರ ಮನಬಂದಂತೆ ಡ್ಯಾಂನ ನಿಷೇಧಿತ ಪ್ರದೇಶದಲ್ಲಿ ಬಲದಂಡೆ ನಾಲೆ ಸೀಳುವ ಕಾಮಗಾರಿ ಕೈಗೊಂಡಿದೆ. ಈ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು. ಬೇಡಿಕೆಗೆ ಮಣಿಯದಿದ್ದರೆ ಕಾನೂನು ಹೋರಾಟಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಒತ್ತಾಯದ ಕಾರಣಕ್ಕೆ ಅವೈಜ್ಞಾನಿಕ ಕಾಮಗಾರಿಗೆ ಕೈ ಹಾಕಿದ್ದು ಸರಿಯಲ್ಲ. ಈ ಕಾಮಗಾರಿಯಿಂದ ಜಲಾಶಯಕ್ಕೆ ಆಗುವ ಅಪಾಯದ ಕುರಿತಂತೆ ಜೂ.25ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭಾರತೀಯ ರೈತ ಒಕ್ಕೂಟದ ಧುರೀಣರಾದ ಪ್ರೊ. ಸಿ.ನರಸಿಂಹಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥರ ನೇತೃತ್ವದಲ್ಲಿ ಭೇಟಿ ಮಾಡಲಾಗುವುದು. ಭದ್ರಾ ಡ್ಯಾಂ, ಅಚ್ಚುಕಟ್ಟು ಕಾಪಾಡುವಂತೆ ಒತ್ತಾಯಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಡೂರು, ತರೀಕೆರೆ, ಹೊಸದುರ್ಗ ಸೇರಿದಂತೆ ನೂರಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಅಣೆಕಟ್ಟೆ ಹಿನ್ನೀರಿನಿಂದ ನೀರು ಒಯ್ಯುವುದಕ್ಕೆ ನಮ್ಮ ವಿರೋಧ ಇಲ್ಲ. ಕುಡಿಯುವ ನೀರು ಪೂರೈಸುವುದಕ್ಕೂ ನಮ್ಮ ಅಭ್ಯಂತರ ಇಲ್ಲ. ಆದರೆ, ಭದ್ರಾ ಡ್ಯಾಂಗೆ ಅಪಾಯ ಆಗುವಂತೆ, ಬಲದಂಡೆ ನಾಲೆಯನ್ನೇ ಸೀಳಿ ಕಾಮಗಾರಿ ಸರಿಯಲ್ಲ. ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಕೊಳ್ಳಿ ಇಡುವ ಈ ನಡೆಗೆ ತೀವ್ರ ವಿರೋಧವಿದೆ ಎಂದರು.

ಬಲದಂಡೆ ನಾಲೆಯಲ್ಲಿ ಸುಮಾರು 7 ಏಡಿ ಕೆಳ ಭಾಗದಲ್ಲಿ ಸೀಳಿ, ನೀರು ಹರಿಸುವ ಯೋಜನೆಯಿಂದ ಭದ್ರಾ ಡ್ಯಾಂಗೆ ಅಪಾಯವಾಗಲಿದೆ. ಬಿಜೆಪಿ ಸರ್ಕಾರ ಹಿನ್ನೀರಿನಿಂದ ನೀರೊಯ್ಯುವ ಯೋಜನೆಗೆ ಅನುಮೋದನೆ ನೀಡಿತ್ತು. ಹಿನ್ನೀರಿನಲ್ಲಿ ಜಾಕ್ ವೆಲ್ ಅಳವಡಿಸುವ ಅಥವಾ ಏತ ನೀರಾವರಿ ಯೋಜನೆಯಡಿ ನೀರು ಪೂರೈಸಲು ಸ್ಪಷ್ಟವಾಗಿ ಹೇಳಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಯೋಜನೆ ಮೂಲ ಉದ್ದೇಶವನ್ನೇ ತಿರುಚಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಅಚ್ಚುಕಟ್ಟು ರೈತರನ್ನು ಆರ್ಥಿಕವಾಗಿ ನಿಸ್ತೇಜಗೊಳಿಸಲು ಹೊರಟಿದೆ ಎಂದು ಆರೋಪಿಸಿದರು.

ಹಿನ್ನೀರಿನಲ್ಲಿ ಜಾಕ್‌ವೆಲ್ ಅಥವಾ ಏತ ನೀರಾವರಿ ಮೂಲಕ ನೀರು ಲಿಫ್ಟ್ ಮಾಡಲು ಸರ್ಕಾರ ವಿದ್ಯುತ್ ವೆಚ್ಚ, ಹಣದ ನೆಪವೊಡ್ಡಿ, ಕಳೆದ 3-4 ತಿಂಗಳಲ್ಲೇ ಯೋಜನೆ ಡಿಪಿಆರ್ ಬದಲಿಸಿದೆ. ಈಗ ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆಯಲ್ಲಿ ಬಂಡೆಯನ್ನೇ ಸೀಳಿ, ಟ್ಯೂಬ್ ಅಳವಡಿಸಿ ಮಾಡಿದ ಕಾಮಗಾರಿಯೇ ಅವೈಜ್ಞಾನಿಕ ಹಾಗೂ ಅಪಾಯಕಾರಿ. ಇದರಿಂದ ನೀರಿನ ರಭಸಕ್ಕೆ ಜಲಾಶಯಕ್ಕೆ ಗಂಭೀರ ಅಪಾಯವಾಗಲಿದೆ. ಭವಿಷ್ಯದಲ್ಲಿ ಶೇ.40ಕ್ಕೂ ಅಧಿಕ ಅಚ್ಚುಕಟ್ಟು ಪ್ರದೇಶವು ಭದ್ರಾ ನೀರನ್ನೇ ಮರೆಯಬೇಕಾಗುತ್ತದೆ. ಅಚ್ಚುಕಟ್ಟು ರೈತರ ಬದುಕು ಬೀದಿ ಪಾಲಾಗುತ್ತದೆ ಎಂದು ಹರೀಶ್‌ ಆತಂಕ ವ್ಯಕ್ತಪಡಿಸಿದರು.

ಭದ್ರಾ ಡ್ಯಾಂನ ಬಫರ್ ಝೋನ್‌ನಲ್ಲಿ ಪೈಪ್‌ ಲೈನ್ ಕಾಮಗಾರಿ ಕೈಗೊಂಡಿದ್ದು, ಅಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದೆಂಬ ನಿಯಮವಿದೆ. ಆದರೆ, ಬಿಆರ್‌ಪಿ ಅಧಿಕಾರಿಗಳು ತಮ್ಮ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಸೋಮವಾರ ಬಿಆರ್‌ಪಿಯಲ್ಲಿ ನಡೆದ ಸಭೆಯಲ್ಲೂ ಆಯಾ ಶಾಸಕರು ತಮ್ಮ ಕ್ಷೇತ್ರಕ್ಕೆ ನೀರು ಒಯ್ಯುವುದಾಗಿ ಹೇಳಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಡ್ಯಾಂ ನೀರು ಕಡಿಮೆಯಾದರೆ ದಾವಣಗೆರೆ ಜಿಲ್ಲೆ ಜನರಿಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದ ಅವರು, ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ 4 ದಶಕದಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ಇದೇ ನಾಯಕರ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಲಿಂಗರಾಜ, ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾ‍ಧವ್, ಎಸ್.ಎಂ. ವೀರೇಶ ಹನಗವಾಡಿ, ಬಿ.ಎಸ್. ಜಗದೀಶ, ಬಾತಿ ವೀರೇಶ ದೊಗ್ಗಳ್ಳಿ, ಶಿರಮಗೊಂಡನಹಳ್ಳಿ ಮಂಜುನಾಥ ಇತರರು ಇದ್ದರು.

- - -

(ಟಾಪ್‌ ಕೋಟ್‌)ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ ಇದೇ ರೀತಿ ಭದ್ರಾ ಡ್ಯಾಂ ಬಫರ್ ಝೋನ್‌ನಲ್ಲಿ ಬಲದಂಡೆ ಕಾಲುವೆಗೆ ಧಕ್ಕೆಯಾಗಿ ನೀರು ಬರದಂತಾಗಿತ್ತು. ಆಗ ಭಾರತೀಯ ರೈತ ಒಕ್ಕೂಟ ನೇತೃತ್ವದಲ್ಲಿ ಅಲ್ಲೇ ಬೀಡುಬಿಟ್ಟು, ದುರಸ್ತಿಗೆ ಒತ್ತಾಯಿಸಿದ್ದೆವು. ಬಂಗಾರಪ್ಪ ಕೆಲವೇ ದಿನಗಳಲ್ಲಿ ಅದನ್ನು ಸರಿಪಡಿಸಿ, ರೈತರಿಗೆ ಸ್ಪಂದಿಸಿದ್ದರು. ಶಿವಮೊಗ್ಗದ ರೈತ ಮುಖಂಡ ಕೆ.ಟಿ. ಗಂಗಾಧರ ನಾವೆಲ್ಲಾ ಚರ್ಚೆ ಮಾಡಿದ್ದು, ಹೋರಾಟ ತೀವ್ರಗೊಳ್ಳುವ ಮುನ್ನ ಇಂತಹ ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿ ಸರ್ಕಾರ ನಿಲ್ಲಿಸಲಿ.

- ಶಾಬನೂರು ಎಚ್.ಆರ್.ಲಿಂಗರಾಜ, ಅಧ್ಯಕ್ಷ, ಭಾರತೀಯ ರೈತ ಒಕ್ಕೂಟ

- - -

-24ಕೆಡಿವಿಜಿ4, 5:

ದಾವಣಗೆರೆಯಲ್ಲಿ ಮಂಗಳವಾರ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ, ಭಾರತೀಯ ರೈತ ಒಕ್ಕೂಟ ಶಾಬನೂರು ಎಚ್.ಆರ್. ಲಿಂಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.