ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು, ರೈತರ ಪ್ರತ್ಯೇಕ ನಿಯೋಗ ಕೊಂಡೊಯ್ದು ಯೋಜನೆಯ ಬಗ್ಗೆ ಮನವೊಲಿಸುವ ಕೆಲಸ ಆಗಬೇಕಿದೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ:ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು, ರೈತರ ಪ್ರತ್ಯೇಕ ನಿಯೋಗ ಕೊಂಡೊಯ್ದು ಯೋಜನೆಯ ಬಗ್ಗೆ ಮನವೊಲಿಸುವ ಕೆಲಸ ಆಗಬೇಕಿದೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಹುಕ್ಕೇರಿ ಮಠದಲ್ಲಿ ವರದಾ-ಬೇಡ್ತಿ ನದಿ ಜೋಡಣೆ ಯೋಜನೆಗೆ ಹಕ್ಕೊತ್ತಾಯ ಮಂಡಿಸುವ ನಿಟ್ಟಿನಲ್ಲಿ ಸೋಮವಾರ ರೈತ ಸಂಘಟನೆಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೇಡ್ತಿ ನದಿಯಿಂದ ವರದಾಕ್ಕೆ ಹರಿಸುವ ನೀರನ್ನು ಗದಗ ಜಿಲ್ಲೆಯ ಶಿರಹಟ್ಟಿ ಬಳಿ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಈ ಬಗ್ಗೆ ಆಕ್ಷೇಪಿಸಿ ಎನ್‌ಡಬ್ಲ್ಯೂಡಿಗೆ ಪತ್ರ ಬರೆದಿದ್ದೇನೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಸಂಗ್ರಹಾಗಾರ ಬೇಕು. ಇದರಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದ ಅವರು, ಜಿಲ್ಲೆಯಲ್ಲಿ ಪ್ರತ್ಯೇಕ ಸಂಗ್ರಹಾಗಾರ ನಿರ್ಮಿಸುವಂತೆ ಡಿಪಿಆರ್‌ಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ನಿಯೋಗ ಹೋಗಬೇಕು. ನಿಗದಿತ ಅವಧಿಯಲ್ಲಿ ಡಿಪಿಆರ್ ಪೂರ್ಣಗೊಳಿಸುವಂತೆ ಕೇಂದ್ರಕ್ಕೆ ನಿಯೋಗ ಹೋಗಬೇಕಿದೆ ಎಂದರು.
ನದಿ ನೀರು ಯಾವುದೇ ಒಂದು ವ್ಯಕ್ತಿ, ಸರ್ಕಾರ ಅಥವಾ ಸಮುದಾಯಕ್ಕೆ ಸೇರಿದ್ದಲ್ಲ. ನಿಸರ್ಗದ ಕೊಡುಗೆಯ ಮೇಲೆ ಎಲ್ಲರಿಗೂ ಹಕ್ಕಿದೆ. ಬೇಡ್ತಿ ನದಿಯಲ್ಲಿ ಸರಾಸರಿ 160 ಟಿಎಂಸಿ ನೀರು ಹರಿಯುತ್ತದೆ. ಇದರಲ್ಲಿ ಕೇವಲ ಶೇ. 8-10ರಷ್ಟು ನೀರನ್ನು ಮಾತ್ರ ವರದಾ ನದಿಗೆ ಹರಿಸುವ ಯೋಜನೆಯಾಗಿದೆ. ಈ ಹಿಂದಿನ ಯೋಜನೆಗೂ ಪ್ರಸ್ತುತ ರೂಪಿಸಲಾಗಿರುವ ಯೋಜನೆಗೂ ಬಹಳ ವ್ಯತ್ಯಾಸವಿದೆ. ಹೊಸ ಯೋಜನೆಯಡಿ ನದಿ ಪಾತ್ರದಿಂದ ಹೊರಗೆ ನೀರು ಸಂಗ್ರಹವಾಗುವುದಿಲ್ಲ. ಯಾವುದೇ ಡ್ಯಾಂ ನಿರ್ಮಾಣ ಮಾಡುವುದಿಲ್ಲ. ಕೇವಲ ಬ್ಯಾರೇಜ್ ನಿರ್ಮಿಸಿ ನೀರು ಸಂಗ್ರಹ ಮಾಡಲಾಗುತ್ತದೆ. ಇದರಿಂದ ಪರಿಸರ ಹಾನಿಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.ಯೋಜನೆಯನ್ನು ವಿರೋಧಿಸುವವರು ಡಿಪಿಆರ್ ಸಿದ್ಧವಾದ ಬಳಿಕ ಅಗತ್ಯವಿದ್ದರೆ ತಜ್ಞರ ನೇಮಕಾತಿ ಮಾಡಿ ಚರ್ಚೆ ನಡೆಸಲಿ. ಆದರೆ ಹಾವೇರಿ ಜಿಲ್ಲೆಯ ರೈತರು, ಸಾರ್ವಜನಿಕರ ಬದುಕನ್ನು ಅಡ ಇಡಲು ಸಾಧ್ಯವಿಲ್ಲ ಎಂದು ಗುಡುಗಿದರು. ಯೊಜನೆಗೆ ವಿರೋಧ ಇರುವ ಕಡೆ ಹೆಚ್ಚು ಜನ ಸೇರುವುದು ಸಹಜ. ಯೋಜನೆ ಅಗತ್ಯವಿರುವ ಜಿಲ್ಲೆಗಳಲ್ಲಿ ಡಿಪಿಆರ್ ಸಿದ್ಧವಾಗುವುದರ ಒಳಗೆ ಹೆಚ್ಚು ಹೆಚ್ಚು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಸಭೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕುಮಾರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರುಮಹೇಶ್ವರ ಸ್ವಾಮೀಜಿ, ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಗುರುಶಾಂತ ಸ್ವಾಮೀಜಿ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣನವರ ಇತರರು ಇದ್ದರು. ಮಲ್ಲಿಕಾರ್ಜುನ ಬಳ್ಳಾರಿ ನಿರ್ವಹಿಸಿದರು.ಎಲ್ಲಾ ಮಠಾಧೀಶರು ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ. ತಾಲೂಕು, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ. ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗುವ ತನಕ ವಿರಾಮ ತೆಗೆದುಕೊಳ್ಳದೆ ಶ್ರಮಿಸೋಣ ಎಂದು ಹುಕ್ಕೇರಿಮಠದ ಶ್ರೀಸದಾಶಿವ ಸ್ವಾಮೀಜಿ ಹೇಳಿದರು.