ಸಾರಾಂಶ
ಹೊಸಪೇಟೆ: ವಿಜಯನಗರ ನೂತನ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ಹೋಗುತ್ತೇವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಬಳಿ ಕೆಪಿಟಿಸಿಎಲ್‌ನಿಂದ ₹೯.೧೫ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಉದ್ಘಾಟಿಸಿ ಮಾತನಾಡಿ, ಗುತ್ತಿಗೆದಾರರು ಮುಂದಿನ ಮೇ, ಜೂನ್ ತಿಂಗಳೊಳಗೆ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.ಕುಡಿಯುವ ನೀರಿನ ಸಮಸ್ಯೆಯಿದ್ದು ಜಿಲ್ಲೆಗೆ ₹೨೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರವಾಸ ಮಾಡುವೆ. ಜನರ ಸಮಸ್ಯೆ ಪರಿಹರಿಸುವ ಜತೆಗೆ ಜನರ ಆಶಯಗಳಿಗೆ ಆದ್ಯತೆ ನೀಡುವೆ. ತುಂಗಭದ್ರಾ ಜಲಾಶಯ ಇದ್ದರೂ ಜಿಲ್ಲೆಗೆ ಹೆಚ್ಚಿನ ಉಪಯೋಗ ಇಲ್ಲ. ನದಿ ತೀರದ ಕೆಲವೇ ಕೆಲವು ಗ್ರಾಮಗಳ ನೀರಾವರಿ ಇದೆ. ಕಮಲಾಪುರ ಹೋಬಳಿಯಲ್ಲೇ ಅಂದಾಜು ೫೦ ಸಾವಿರ ಎಕರೆ ಮಳೆ ಆಶ್ರಿತ ಜಮೀನು ಇದೆ. ನಮ್ಮ ತಾಲೂಕು ಮಾತ್ರವಲ್ಲ, ಜಿಲ್ಲೆ ಹಿಂದುಳಿದಿದೆ. ನಮ್ಮ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಘೋಷಣೆ ಮಾಡಲು ಮುಖ್ಯಮಂತ್ರಿ ಬಳಿ ನಿಯೋಗ ಹೋಗುತ್ತೇವೆ ಎಂದರು.
ಹೊಸಪೇಟೆ ಜಿಲ್ಲಾಕೇಂದ್ರ ಆಗಿದೆ. ಗಾದಿಗನೂರಿನ ಬಳಿ ೨೨೦ ಕೆವಿ ಕೇಂದ್ರಗಳನ್ನು ಸ್ಥಾಪನೆಗೆ ಯೋಜನೆ ರೂಪಿಸಿ. ಈ ಭಾಗದಲ್ಲಿ ಹೆಚ್ಚಿನ ಕಾರ್ಖಾನೆಗಳು ಬರಲು ಕ್ರಮವಹಿಸಲಾಗುವುದು. ಇಂಗಳಿಗಿಯಲ್ಲಿ 20 ಎಕರೆಯಲ್ಲಿ 220 ಕೆವಿ ವಿದ್ಯುತ್ ಉಪಕೇಂದ್ರ, ರಾಯರಕೆರೆಯಲ್ಲಿ ಒಂದು ಉಪಕೇಂದ್ರ ಆಗುತ್ತಿದೆ. ನಾಗೇನಹಳ್ಳಿಗೆ ಉಪಕೇಂದ್ರ ಆಗಬೇಕಿದೆ. ಇನ್ನೂ ಮುಂದಿನ ಪ್ರತಿ ಗ್ರಾಪಂಗೊಂದು 33ರಿಂದ 40 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಬಹುದು. ಇದಕ್ಕೆ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದರು.ಮಾಜಿ ಶಾಸಕ ಆನಂದ ಸಿಂಗ್ ಅವರು ಏತ ನೀರಾವರಿ ಪೂರ್ಣ ಮಾಡಿದ್ದಾರೆ. ಮಳೆಯಿಲ್ಲದೇ ಸಮಸ್ಯೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆರೆ ನಿರ್ಮಾಣ ಹಾಗೂ ತುಂಬಿಸುವ ಕಾರ್ಯ ನಡೆಯಲಿದೆ ಎಂದರು.
ತಾಪಂ ಇಒ ಉಮೇಶ್ ಮಾತನಾಡಿ, ಇಲ್ಲಿನ ಉಪಕೇಂದ್ರದಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಆಗಲಿದೆ. ಈ ಕೇಂದ್ರದಿಂದ ಮುಂದಿನ ದಿನಗಳಲ್ಲಿ ಸಣ್ಣ ಕೈಗಾರಿಕೆ ಆರಂಭಕ್ಕೆ ಸಹಕಾರ ಆಗಲಿದೆ ಎಂದರು.ನಿವೃತ್ತ ಅಧಿಕಾರಿ ಪ್ರಹ್ಲಾದ್ ಪ್ರಾಸ್ತಾವಿಕ ಮಾತನಾಡಿದರು. ಬಿಇಒ ಚನ್ನಬಸಪ್ಪ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಹುಲಿಗೆಮ್ಮ, ಮುಖಂಡರಾದ ಹಾಲಪ್ಪ, ಜೋಗದ ಪಂಚಾಪ್ಪ, ಹನುಮಂತಪ್ಪ, ಮೂಕಪ್ಪ ಮತ್ತಿತರರಿದ್ದರು.