ಸಾರಾಂಶ
ಉಪಚುನಾವಣೆಗಾಗಿ ಈ ವಿವಾದ ಮಾಡಿಲ್ಲ. ವಾಲ್ಮೀಕಿ ನಿಗಮದ ಹಗರಣ ಮೂಲ ಸಂಡೂರು, ಹಾವೇರಿಯಲ್ಲಿ ಬೇರೆ ಬೇರೆ ವಿಷಯಗಳು ಇವೆ. ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೊಪ್ಪಳ
ವಿಜಯಪುರ ಜಿಲ್ಲೆಯ ರೈತರ ಪಹಣಿಯಲ್ಲಿದ್ದ ವಕ್ಫ್ ಹೆಸರು ಡಿಲಿಟ್ ಮಾಡಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಮಾಡಿಸಲಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ, ಸಿಎಂ ಆಪ್ತ ರಾಘವೇಂದ್ರ ಹಿಟ್ನಾಳ ಜಿಲ್ಲೆಯ ರೈತರ ಬಗ್ಗೆ ಕಾಳಜಿ ವಹಿಸಿ, ಮೊದಲು ಈ ಕೆಲಸ ಮಾಡಿಸಲಿ ಎಂದು ಸವಾಲು ಹಾಕಿದರು.
ಉಪಚುನಾವಣೆಗಾಗಿ ಈ ವಿವಾದ ಮಾಡಿಲ್ಲ. ವಾಲ್ಮೀಕಿ ನಿಗಮದ ಹಗರಣ ಮೂಲ ಸಂಡೂರು, ಹಾವೇರಿಯಲ್ಲಿ ಬೇರೆ ಬೇರೆ ವಿಷಯಗಳು ಇವೆ. ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.ನಮಗೆ ನಮ್ಮ ರೈತರ ಬಗ್ಗೆ ಕಾಳಜಿ ಇರುವುದರಿಂದ ಅವರ ಪರವಾಗಿ ಮಾತನಾಡುತ್ತೇವೆ. ನಿಮಗೂ ಕಾಳಜಿ ಇದ್ದರೆ, ನಿಮ್ಮದೇ ಸರ್ಕಾರ ಇದ್ದು, ಕೂಡಲೇ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಎಂದರು.
ರಾಜ್ಯಾದ್ಯಂತ ಬಿಜೆಪಿಯಿಂದ ಹೆಲ್ಫ್ ಲೈನ್ ಆರಂಭ ಮಾಡಲಾಗಿದೆ. ಅಲ್ಲಿ ಕಾನೂನು ಸಲಹೆ ನೀಡಲಾಗುವುದು. ಬಿಜೆಪಿ ಸರ್ಕಾರವಿದ್ದಾಗಲೂ ಅಧಿಕಾರಿಗಳು ವಕ್ಫ್ ಆಸ್ತಿ ಆದೇಶ ಮಾಡಿರಬಹುದು. ಇದರ ಕೂಲಂಕಷ ತನಿಖೆಯಾಗಬೇಕು. ಯಾವುದೇ ಕಾರಣಕ್ಕೂ ರೈತರ ಭೂಮಿ ವಶಪಡಿಸಿಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಇದಕ್ಕಾಗಿಯೇ ಈಗ ನಾವು ರಾಜ್ಯಾದ್ಯಂತ ರೈತರ ಹಿತ ಕಾಯುತ್ತಿದ್ದೇವೆ. ಸರ್ಕಾರದಲ್ಲಿ ಇರುವ ನೀವು ಸಾಂತ್ವನದ ಮಾತು ಹೇಳುವ ಬದಲು, ರೈತರ ತೊಂದರೆಯನ್ನು ನೀಗಿಸಲು ವಕ್ಫ್ ಹೆಸರು ಡಿಲಿಟ್ ಮಾಡುವ ಕೆಲಸ ಮಾಡಿ ಎಂದರು.ಸಿಎಂ ಕುಲದೇವರು ಇರುವ ಸಾವಳೇಶ್ವರ ಭೂಮಿ ವಕ್ಫ್ ಆಸ್ತಿಯಾಗಿದೆ. ಕುಲದೇವರ ಆಸ್ತಿಯನ್ನೆ ಉಳಿಸಿಕೊಳ್ಳಲು ಆಗುತ್ತಿಲ್ಲ ನಿಮ್ಮ ಸಿಎಂ ಅವರಿಗೆ, ಇನ್ನೂ ಬೇರೆಯವರ ಆಸ್ತಿ ಉಳಿಸುತ್ತಾರಾ? ಎಂದು ಪ್ರಶ್ನೆ ಮಾಡಿದರು.
ನ. 4ರಂದು ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ವಿಜಯಪುರದಲ್ಲಿ ವಿಜಯೇಂದ್ರ ವಕ್ಫ್ ತನಿಖೆ ಸಮಿತಿ ಮಾಡಿದ್ದರಿಂದ ಹೆದರಿ ಹೆಸರುಗಳನ್ನು ಡಿಲಿಟ್ ಮಾಡಿದ್ದಾರೆ. ರಾಜ್ಯದಲ್ಲಿ ಈಗ ಜನ ಭಯಪಡುವಂತಹ ಸ್ಥಿತಿ ಇದೆ. ರೈತರು ಭಯಪಡಬಾರದು ನಾವಿರುತ್ತೇವೆ ಎಂದು ಹೇಳಿದರು.ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ, ಗಣೇಶ ಹೊರತಟ್ನಾಳ ಮೊದಲಾದವರು ಇದ್ದರು.