ಸಾರಾಂಶ
ದಾವಣಗೆರೆ: ದೆಹಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಬೆನ್ನಲ್ಲೇ ಸೋಲಿನ ಭೀತಿಯಿಂದ ಕೇಂದ್ರದ ಬಿಜೆಪಿ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 20 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಆರೋಪಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸೋಲುವ ಭೀತಿಯು ಕೇಂದ್ರದ ಬಿಜೆಪಿ ನಾಯಕರನ್ನು ತೀವ್ರವಾಗಿ ಕಾಡುತ್ತಿದೆ. ಹಾಗಾಗಿ ಅಭಿವೃದ್ಧಿ ಆಧಾರಿತ ಚುನಾವಣೆ ಮೇಲೆ ನಂಬಿಕೆ ಇಲ್ಲದ ಬಿಜೆಪಿ ನಾಯಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದರು.ಮತ್ತೆ ಆಮ್ ಆದ್ಮಿ ಪಕ್ಷವೇ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆಮ್ ಆದ್ಮಿ ಪಕ್ಷವನ್ನು ರಾಜಕೀಯವಾಗಿ ಮಣಿಸಲು ಕೇಂದ್ರ ಸರ್ಕಾರ ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ವೈಷಮ್ಯಕ್ಕೆ ಬಳಸುತ್ತಿದೆ. ಆಮ್‌ಆದ್ಮಿ ಪಕ್ಷದ ವಿರುದ್ಧ ಇಂತಹ ಸಂಸ್ಥೆಗಳನ್ನೆಲ್ಲಾ ದುರ್ಬಳಕೆ ಮಾಡಿಕೊಂಡಿದೆ. ಆದರೆ, ಅಮೇರಿಕಾದಲ್ಲಿ ಅದಾನಿ ವಿರುದ್ಧ 2,500 ಕೋಟಿ ರು. ಲಂಚದ ಪ್ರಕರಣದ ಬಗ್ಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕುಟುಂಬ ರಾಜಕಾರಣಿದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಮೂರೂ ಉಪ ಚುನಾವಣೆಗಳಲ್ಲೂ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಎಲ್ಲೆಡೆ ಇಂದು ಬೇರು ಬಿಟ್ಟಿರುವ ಕುಟುಂಬ ರಾಜಕಾರಣ, ಅಧಿಕಾರ ಕೇಂದ್ರೀಕರಣದಿಂದ ದೂರವಾಗಬೇಕಿದೆ. ಭ್ರಷ್ಟಾಚಾರವು ತೊಲಗಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ನೆನೆಗುದಿಗೆ ಬಿದ್ದಿವೆ. ಅಧಿಕಾರ ಕೇಂದ್ರಕೃತವಾಗಿವೆ ಎಂದರು.ಪ್ರಧಾನಿ ಅಭಿಲಾಷೆಯಂತೆಯೇ ಏಕವ್ಯಕ್ತಿ, ಏಕ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಅರವಿಂದ ಕೇಜ್ರಿವಾಲ್ ರೀತಿ ಕಾಳಜಿಯು ಇತರೆ ರಾಜಕೀಯ ಪಕ್ಷಗಳಿಗಾಗಲೀ, ರಾಜಕೀಯ ನಾಯಕರಿ ಗಾಗಲೀ ಇಲ್ಲವಾಗಿದೆ. ದರೋಡೆಮಾಡುವ ಮೂರೂ ರಾಜಕೀಯ ಪಕ್ಷಗಳು ಜನರ ಹಿತವನ್ನೇ ಮರೆತಿವೆ. ಗ್ಯಾರಂಟಿ ಯೋಜನೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಪಡಿತರ ಚೀಟಿ ರದ್ದುಪಡಿಸಲಾಗುತ್ತಿದೆ. ಅಭಿವೃದ್ಧಿಗೆ ಮೀಸಲಾದ ಹಣ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಬಲಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಿನ ಸರ್ಕಾರವು ಶೇ.50 ಕಮೀಷನ್‌ನ ಸರ್ಕಾರವಾಗಿರುವ ಗುಮಾನಿ ಇದೆ. ಉಳ್ಳವರಿಗೆ ಮತ್ತೆ ಭೂಮಿ ಸಿಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ರೈತರು ಭೂಮಿ ಹೊಂದಲು, ಇರುವ ಭೂಮಿಯನ್ನೇ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭೂ ಕಾಯ್ದೆ ತಿದ್ದುಪಡಿ ತಂದು, ಭೂ ಕಬಳಿಕೆ ಮಾಡಲಾಗುತ್ತಿದೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ, ಕುಮಾರಪ್ಪ, ಉಷಾ, ಆದಿಲ್ ಖಾನ್ ಇತರರು ಇದ್ದರು. ಕೋಟ್ಕರ್ನಾಟಕದಲ್ಲಿ ಜನರಿಗೆ ಉಚಿತ ಚಿಕಿತ್ಸೆ ಕೊಡುವ ನೆಪ ಹೇಳಿ ಬಿಜೆಪಿ ಸರ್ಕಾರವು ಆಮ್ ಆದ್ಮಿ ಪಕ್ಷದ ನಮ್ಮ ಕ್ಲಿನಿಕ್‌ಗಳನ್ನೇ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರದ ಬಗ್ಗೆ ನಂಬಿಕೆ ಇಲ್ಲದ ಜನರು ಈ ಕ್ಲಿನಿಕ್‌ಗಳಿಗೆ ಹೋಗುತ್ತಿಲ್ಲ. - ಪೃಥ್ವಿ ರೆಡ್ಡಿ, ಆಪ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ,