ದೆಹಲಿ ವಿಧಾನಸಭಾ ಚುನಾವಣೆ; ನಗರದಲ್ಲಿ ಬಿಜೆಪಿ ವಿಜಯೋತ್ಸವ

| Published : Feb 09 2025, 01:18 AM IST

ಸಾರಾಂಶ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ತೆರೆಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ನಿಜಗುಣರಾಜು, ಎಸ್. ಮಹದೇವಯ್ಯ ದೆಹಲಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮಡಿಲಿಗೆ ಸಮರ್ಪಿಸಿರುವ ದೆಹಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರಮೋದಿ ಮಾರ್ಗದರ್ಶನದಲ್ಲಿ ನೂತನ ಸರ್ಕಾರ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎಂದರು.

ಗಂಗೆಯಲ್ಲಿ ಮುಳುಗೆದ್ದರೆ ಬಡತನ ಹೋಗುತ್ತದೆಯೇ? ಎಂಬ ವ್ಯಂಗ್ಯ ನುಡಿಗೆ ದೆಹಲಿಯ ಜನರು ತಕ್ಕ ಉತ್ತರ ನೀಡಿದ್ದಾರೆ, ಕ್ರೇಜಿವಾಲ್ ಅವರ ಸುಳ್ಳು ಭರವಸೆಯನ್ನು ಅಲ್ಲಿನ ಜನ ಧಿಕ್ಕರಿಸಿದ್ದಾರೆ ಎಂದರು. ದೆಹಲಿ ಚುನಾವಣೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಪಕ್ಷ ಪ್ರಮುಖರು ಹಾಗೂ ಕಾರ್ಯಕರ್ತರಿಗೆ, ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಡಾ.ಬಾಬು ನಗರ ಮಂಡಲ ಅಧ್ಯಕ್ಷ ಶಿವರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್, ಚಾಮುಲ್ ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ, ಜಿಲ್ಲಾ ಪ್ರಕೋಷ್ಟ ಸಂಚಾಲಕ ಕಿಲಗೆರೆ ಬಸವರಾಜು, ಜಿಲ್ಲಾ ವಕ್ತಾರ ಕಾಡಳ್ಳಿ ಕುಮಾರ್‌, ಎಸ್ಸಿಮೋರ್ಚಾ ಜಿಲ್ಲಾಧ್ಯಕ್ಷ ಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ರಾಮಸಮುದ್ರ, ಶಿವಣ್ಣ, ವೇಣುಗೋಪಾಲ್, ಡ್ರೈವರ್ ಮಹಾದೇವಯ್ಯ ಇತರರು ಇದ್ದರು.