ಕೇಂದ್ರ ಸರ್ಕಾರದ 2018ರಲ್ಲಿ ಅಂಗನವಾಡಿ ನೌಕರರ ವೇತನ ಹೆಚ್ಚಳ, ಐ ಟಿ ಡಿ ಸಿ ಯೋಜನೆಗೆ ಹೆಚ್ಚಿನ ಅನುದಾನ ಹಾಗೂ 2017ರಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೌಷ್ಟಿಕ ಆಹಾರದ ಬೆಲೆ ಏರಿಕೆ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಕನ್ನಡ ಪ್ರಭ ವಾರ್ತೆ ಮದ್ದೂರು

ಅಂಗನವಾಡಿ ನೌಕರರ ಗೌರವ ಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ ತಿಂಗಳಲ್ಲಿ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ಹೇಳಿದರು. ಪಟ್ಟಣದ ಮದ್ದೂರಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಅಂಗನವಾಡಿ ನೌಕರರ ಸಂಘದ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಡಿಕೆಗಳ ಹೋರಾಟದ ಮೊದಲ ಹಂತವಾಗಿ ಜನಪ್ರತಿನಿಧಿಗಳನ್ನು ಎಚ್ಚರಿಸುವ ಉದ್ದೇಶದಿಂದ ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ ರಾಜ್ಯದ ಸಂಸದರು ಹಾಗೂ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಅಂಗನವಾಡಿ ನೌಕರರಿಗೆ ಕನಿಷ್ಠ ₹15 ಸಾವಿರ ವೇತನ ನಿಗದಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ, ವೇತನವನ್ನು ₹1 ಸಾವಿರ ಮಾತ್ರ ಹೆಚ್ಚಳ ಮಾಡಿದೆ. ಅಂಗನವಾಡಿ ನೌಕರರ ಹೋರಾಟದ ಮೊದಲ ಹಂತದಲ್ಲಿ ಅ.23ರಂದು ಮಂಡ್ಯ ಜಿಲ್ಲಾ ಸಮ್ಮೇಳನ ನಡೆಸಲಾಗುವುದು. ಆನಂತರ ಡಿಸೆಂಬರ್ 23ರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯುವ ಅಂಗನವಾಡಿ ನೌಕರರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ದೆಹಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಹೋರಾಟ ನಡೆಸಲಾಗುವುದು ಎಂದರು.

ಕೇಂದ್ರ ಸರ್ಕಾರದ 2018ರಲ್ಲಿ ಅಂಗನವಾಡಿ ನೌಕರರ ವೇತನ ಹೆಚ್ಚಳ, ಐ ಟಿ ಡಿ ಸಿ ಯೋಜನೆಗೆ ಹೆಚ್ಚಿನ ಅನುದಾನ ಹಾಗೂ 2017ರಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೌಷ್ಟಿಕ ಆಹಾರದ ಬೆಲೆ ಏರಿಕೆ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಅಂಗನವಾಡಿ ನೌಕರರನ್ನು ಪ್ರಸ್ತುತ ಬಿಎಲ್ ಒ ಹಾಗೂ ಎಸ್ಐಆರ್ ಕೆಲಸಕ್ಕೆ ನೇಮಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಮಕ್ಕಳಿಗೆ ಶಿಕ್ಷಣ ನೀಡಲು ಸಮಯಾವಕಾಶ ಕೊರತೆ ಉಂಟಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರನ್ನು ಬಿ ಎಲ್ ಒ ಕೆಲಸದಿಂದ ಕೈ ಬಿಡುವಂತೆ ಸಮ್ಮೇಳನದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಆದರೂ ಸಹ ಸರ್ಕಾರ ಅಂಗನವಾಡಿ ನೌಕರರ ಗೌರವ ಧನ ಹೆಚ್ಚಳ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಸಮ್ಮೇಳದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿ ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳಲು ತೀರ್ಮಾನಿಸಲಾಯಿತು.

ಸಮ್ಮೇಳನದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಮಂಜುಳಾ ರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಜಯಶೀಲ, ಸಂಘದ ಯಶೋಧ, ಪಿ.ಬಿ.ಪ್ರಣಿತ, ಶೈಲಜಾ, ತನುಜ, ವಿಜಯ ನಾಗಮ್ಮ ಮತ್ತಿತರರು ಭಾಗವಹಿಸಿದ್ದರು.