ನವದೆಹಲಿಯ ಇಂದ್ರಪ್ರಸ್ಥದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಉಡುಪಿ : ನವದೆಹಲಿಯ ಇಂದ್ರಪ್ರಸ್ಥದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.ಈ ಸಂದರ್ಭ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031ರಲ್ಲಿ ನಡೆಯಲಿದೆ. ಈ ಬಗ್ಗೆ ಪಂಚವಾರ್ಷಿಕ ಯೋಜನೆಯನ್ನು ಶ್ರೀಗಳು ಹಮ್ಮಿಕೊಂಡಿದ್ದು, ಅದರ ಲಾಂಛನವನ್ನು ನರೇಂದ್ರ ಮೋದಿ ಜಿ ಅವರು ಬಿಡುಗಡೆ ಮಾಡಿದರು.ಶ್ರೀಗಳು ಮೋದಿ ಅವರನ್ನು ಯಕ್ಷಗಾನದ ರಾಜಕಿರೀಟ ತೊಡಿಸಿ ಶಾಲು, ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ, ಫಲ ಮಂತ್ರಾಕ್ಷತೆ ನೀಡಿ ಸಂಮಾನಿಸಿದರು.ಅಲ್ಲದೆ ಕಳೆದ ವಾರ ಮೋದಿ ಅವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಅವರ ಹೆಸರು ಗೋತ್ರ ನಕ್ಷತ್ರ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮ ನಡೆಸಲಾಗಿತ್ತು. ಅದರ ಪ್ರಸಾದವನ್ನೂ ಸ್ವಾಮೀಜಿಯವರು ಮೋದಿ ಅವರಿಗೆ ನೀಡಿ ಶುಭ ಕೋರಿದರು.

ಶ್ರೀಗಳು, ದೇಶದ ರಾಜಧಾನಿಯಲ್ಲಿ ದೇಶ, ಧರ್ಮದ ಒಳಿತಿಗಾಗಿ ಹೋಮ ಹವನ, ಸತ್ಸಂಗ, ಜಪಯಜ್ಞ ನಡೆಸಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿದ್ದು ತುಂಬ ಸಂತೋಷ ತಂದಿದೆ‌. ದೇಶ ಧರ್ಮದ ಒಳತಿಗೆ ನಿಶಿಹಗಲೆನ್ನದೇ ದುಡಿಯುತ್ತಿರುವ ಪ್ರಧಾನಿಗಳು 3ನೇ ಬಾರಿ ಪ್ರಧಾನಿಯಾಗಿ ದೇಶದ ಮತ್ತು ಭಾರತೀಯರ ಗೌರವವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಇನ್ನೂ ಬಹುಕಾಲ ಅವರು ಯಶಸ್ವಿಯಾಗಿ ಭಾರತವನ್ನು ಮುನ್ನಡೆಸುವಂತಾಗಲಿ ಎಂದು ಹಾರೈಸಿದರು.ಮೋದಿ ಅವರು, ಶ್ರೀ ವಿಶ್ವೇಶತೀರ್ಥರು ಮತ್ತು ಪೇಜಾವರ ಮಠ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಿಯಾಗಿವೆ. ಗುರುಗಳ ಜನ್ಮಶತಾಬ್ದ ಯೋಜನೆಗಳು ಯಶಸ್ವಿಯಾಗಿ ಸಮಾಜಕ್ಕೆ ದೇಶಕ್ಕೆ ಮತ್ತಷ್ಟು ಬಲ‌ ನೀಡುವಂತಾಗಲಿ. ಉಡುಪಿಗೂ ದ್ವಾರಕೆಗೂ ಬಹಳ ಗಾಢ ಸಂಬಂಧ ಇದೆ.‌ ಆದ್ದರಿಂದ ಜನ್ಮಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ಒಂದು ಯೋಜನೆ ಮಾಡಿ ಎಂದು ಸಲಹೆ ನೀಡಿದರು.‌ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಚೆನ್ನೈ ಉಡುಪಿ ಹೋಮ್ಸ್ ಮಾಲಕ ಪಿ. ರಾಮಪ್ರಸಾದ್, ಎಂ. ಆರ್. ಜಿ. ಗ್ರೂಪ್ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ , ಕೊಯಮುತತೂರಿನ ಉದ್ಯಮಿ ರವಿಶ್ಯಾಮ್, ನವದೆಹಲಿ ಕೇಂದ್ರೀಯ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಬೆಂಗಳೂರಿನ ಉದ್ಯಮಿ ಹರೀಶ್ ರಾಯಸ್, ಮೈಸೂರಿನ ವಿಜಯವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೆಚ್. ವಾಸುದೇವ ಭಟ್, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ, ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು. ಮಠದ ಪಿಆರ್‌ಓ ವಾಸುದೇವ ಭಟ್ ಪೆರಂಪಳ್ಳಿ ಎಲ್ಲರನ್ನೂ ಮೋದೀಜಿಯವರಿಗೆ ಪರಿಚಯಿಸಿ ಕಾರ್ಯಕ್ರಮ ಸಂಯೋಜಿದರು.