ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೆ ಗ್ರಾಮೀಣ ಜನರ ಬದುಕಿನ ಉದ್ಯೋಗ ಕಸಿಯುವ ದುರುದ್ದೇಶದೊಂದಿಗೆ ಮ-ನರೇಗಾ ಕಾಯ್ದೆ ರದ್ದು ಮಾಡಿ ಜಾರಿಗೆ ತರಲು ಮುಂದಾಗಿರುವ ವಿಬಿ ಜಿ ರಾಮ್‌ಜಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ಕಾಯ್ದೆ ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಸಲಾಗುವುದು. ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೆ ಗ್ರಾಮೀಣ ಜನರ ಬದುಕಿನ ಉದ್ಯೋಗ ಕಸಿಯುವ ದುರುದ್ದೇಶದೊಂದಿಗೆ ಮ-ನರೇಗಾ ಕಾಯ್ದೆ ರದ್ದು ಮಾಡಿ ಜಾರಿಗೆ ತರಲು ಮುಂದಾಗಿರುವ ವಿಬಿ ಜಿ ರಾಮ್‌ಜಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ಕಾಯ್ದೆ ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಸಲಾಗುವುದು.ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಮ-ನರೇಗಾ ಕಾಯ್ದೆ ರದ್ದು ಹಾಗೂ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಲು ಶನಿವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು ಎಂಬ ಸದುದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 20 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಮಹತ್ವದ ಕಾಯ್ದೆ ಮ-ನರೇಗಾ, ಇದನ್ನು ರದ್ದು ಪಡಿಸುವ ಮೂಲಕ ಹಾಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಗ್ರಾಮೀಣರ ಉದ್ಯೋಗದ ಹಕ್ಕು ಕಿತ್ತುಕೊಂಡಿದೆ ಎಂದು ಆರೋಪಿಸಿದರು.ಮ-ನರೇಗಾ ಯೋಜನೆ ಹಿಂಪಡೆಯುವುದು ಹಾಗೂ ವಿಬಿ ಜಿ ರಾಮ್‌ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿ ನೂತನ ಕಾಯ್ದೆ ಜಾರಿಗೊಳಿಸಿದೆ. ಇದು ಅಕ್ಷಮ್ಯ ಎಂದರು.ಗ್ರಾಪಂ ಅಧಿಕಾರ ಕಿತ್ತುಕೊಂಡ ಕೇಂದ್ರ:

ಮ-ನರೇಗಾ ಕಾಯ್ದೆಯಂತೆ ಪ್ರತಿಯೊಬ್ಬ ನರೇಗಾ ಕಾರ್ಮಿಕರಿಗೂ ವಾರ್ಷಿಕ ಕನಿಷ್ಠ 100 ದಿನಗಳ ಕೆಲಸ ನೀಡಬೇಕಿತ್ತು. ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಆದರೆ, ಹೊಸ ಕಾಯ್ದೆಯಂತೆ ಕೇಂದ್ರ ಸರ್ಕಾರ ಅಧಿಸೂಚಿಸುವ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರ ಯಾವ ಗ್ರಾಪಂ ವ್ಯಾಪ್ತಿಗೆ ಕೆಲಸದ ಅಧಿಸೂಚನೆ ಪ್ರಕಟಿಸುತ್ತದೆಯೋ ಅಲ್ಲಿ ಮಾತ್ರ ಕೆಲಸವಾಗಲಿದೆ. ಜತೆಗೆ ಗ್ರಾಪಂಗಳ ಅಧಿಕಾರವನ್ನೂ ಕೇಂದ್ರ ಸರ್ಕಾರ ಮೊಟಕು ಮಾಡಿದೆ. ಕೇವಲ ಮೇಲ್ವಿಚಾರಣೆಯನ್ನು ಮಾತ್ರ ಗ್ರಾಪಂಗಳು ಮಾಡಬೇಕಿದ್ದು, ಉಳಿದೆಲ್ಲವನ್ನು ಗುತ್ತಿಗೆದಾರರಿಗೆ ವಹಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.3 ಸಾವಿರ ಕೋಟಿ ರು. ಹೆಚ್ಚುವರಿ ಹೊರೆ:

ಮನರೇಗಾ ಯೋಜನೆ ಅಡಿ ಕಾರ್ಮಿಕರಿಗೆ ವೇತನದ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದ್ದಾಗಿತ್ತು. ಒಟ್ಟಾರೆ ಕೇಂದ್ರ ಸರ್ಕಾರ ಶೇ.90, ರಾಜ್ಯ ಸರ್ಕಾರ ಶೇ.10ರಷ್ಟು ಅನುದಾನ ನೀಡುತ್ತಿದ್ದವು. ಆದರೀಗ ಆ ಪಾಲನ್ನು 60:40ರ ಅನುಪಾತಕ್ಕೆ ಹೆಚ್ಚಿಸಲಾಗಿದೆ. ಅದರಿಂದಾಗಿ ರಾಜ್ಯ ಸರ್ಕಾರಕ್ಕೆ 3 ಸಾವಿರ ಕೋಟಿ ರು. ಹೆಚ್ಚುವರಿ ಹಣ ನೀಡಬೇಕಿದೆ. ಇದು ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ಕುರಿತು ಪ್ರಶ್ನಿಸುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ಸಿಗುತ್ತಿದ್ದ ಉದ್ಯೋಗದಲ್ಲಿನ ಕಡಿತದ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎಂದು ತಿಳಿಸಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಎಚ್‌.ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಶರಣಪ್ರಕಾಶ್‌ ಪಾಟೀಲ್‌, ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್‌ ಇತರರಿದ್ದರು.ಗಾಂಧಿಯನ್ನು 2ನೇಬಾರಿ ಕೊಲೆ: ಸಿಎಂ

ಈ ಹಿಂದೆ ನಾಥೂರಾಮ್‌ ಗೋಡ್ಸೆ ಮಹಾತ್ಮಗಾಂಧಿ ಅವರನ್ನು ಗುಂಡು ಹೊಡೆದು ಕೊಂದಿತು. ಈಗ ಮ-ನರೇಗಾ ಯೋಜನೆ ಹೆಸರು ಬದಲಿಸಿ ಬಿಜೆಪಿ ಎರಡನೇ ಬಾರಿಗೆ ಮಹಾತ್ಮ ಗಾಂಧಿಯನ್ನು ಕೊಂದಿದೆ. ಗಾಂಧೀಜಿ ಅವರ ಬಗ್ಗೆ ಇಷ್ಟು ದ್ವೇಷ ಮಾಡಬಾರದು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಚಿಂತನೆ ನಾಶ ಮಾಡುವ ಕೆಲಸ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಿ ರಾಮ್‌ ಜಿ ವಿರುದ್ಧ ಗ್ರಾಮದಿಂದ ರಾಜ್ಯದವರೆಗೆ ಹೋರಾಟ:

ಮ-ನರೇಗಾ ಯೋಜನೆ ರದ್ದು ಮಾಡಿ ‘ವಿಬಿ ಜಿ ರಾಮ್ ಜಿ ಕಾಯ್ದೆ’ ತಂದಿರುವ ವಿರುದ್ಧ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷ ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಹೋರಾಟ ಮಾಡಲಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮ-ನರೇಗಾ ಮರುಸ್ಥಾಪನೆಯಾಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಕೂಲಿ ಕಾರ್ಮಿಕರ ಬದುಕು ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಬಿ ಜಿ ರಾಮ್ ಜಿ ಕಾಯ್ದೆ ಮಾರಕವಾಗಿದೆ. ಈ ಕಾಯ್ದೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು. ನಮ್ಮ ಹೋರಾಟ ನಮ್ಮ ಪಕ್ಷ ಅಥವಾ ಸರ್ಕಾರಕ್ಕೆ ಸೀಮಿತವಾಗಿರದೆ ಪ್ರತಿ ಗ್ರಾಪಂನ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುವುದು. ಈ ಕುರಿತು ಗ್ರಾಮ ಸಭೆಗಳನ್ನು ಮಾಡಿ ಜನರಿಗೆ ವಿಬಿ ಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳ ಕುರಿತು ತಿಳಿಸುತ್ತೇವೆ. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹೋರಾಟ ಮಾಡುತ್ತೇವೆ. ಕರಾಳ ಕೃಷಿ ಕಾಯ್ದೆ ಹಿಂಪಡೆದಂತೆಯೇ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ ಮಾಡಲಾಗುವುದು ಎಂದರು.

ಗ್ರಾಮೀಣ ಭಾಗದ ಜನ ತಮ್ಮ ಬೆವರು ಸುರಿಸಿ ತಮ್ಮ ಹಳ್ಳಿಗಳ ಅಭಿವೃದ್ಧಿ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಲಾಗುತ್ತಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಕೃಷಿ ಚಟುವಟಿಕೆ, ಮೀನುಗಾರಿಕೆ ಎಲ್ಲದಕ್ಕೂ ಹೊಡೆತ ಬೀಳಲಿದೆ. ಪ್ರತಿಯೊಂದಕ್ಕೂ ಮಾತನಾಡುವ ರಾಜ್ಯ ಬಿಜೆಪಿ ನಾಯಕರು ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಮಾತನಾಡುತ್ತಿಲ್ಲ. ಕಾಯ್ದೆ ಸರಿಯಾಗಿದ್ದರೆ ಅವರು ಸ್ವಾಗತಿಸಲಿ ಅಥವಾ ತಪ್ಪಿದ್ದರೆ ವಿರೋಧ ಮಾಡಿ ಮಾತನಾಡಲಿ. ಈ ವಿಚಾರವಾಗಿ ಮೌನವಾಗಿರುವುದೇಕೆ ಎಂಬುದು ಹೇಳಬೇಕು ಎಂದು ಆಗ್ರಹಿಸಿದರು.

ಕನಕಪುರ, ಹಾವೇರಿ ಬಂದು ನೋಡಲಿ:

ಮ-ನರೇಗಾ ಯೋಜನೆ ಬಳಕೆ ಬಗ್ಗೆ ತಿಳಿಯಬೇಕಾದರೆ ಹಾವೇರಿ ಜಿಲ್ಲೆ ಮತ್ತು ಕನಕಪುರ ತಾಲೂಕುಗಳನ್ನು ನೋಡಬೇಕು. ಕನಕಪುರದಲ್ಲಿ ಪ್ರತಿ ಗ್ರಾಮದಲ್ಲೂ ನರೇಗಾ ಬಳಕೆ ಮಾಡಿ ಕೆಲಸ ಮಾಡಲಾಗಿದೆ. ನರೇಗಾ ಕಾರ್ಮಿಕರ ಮೂಲಕ ಅರ್ಕಾವತಿ ನದಿಗೆ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. 50 ಸಾವಿರ ದನದ ಕೊಟ್ಟಿಗೆ, ಪಂಚಾಯತಿ ಕಟ್ಟಡಗಳು, ಉದ್ಯಾನ, ಆಟದ ಮೈದಾನ ನಿರ್ಮಿಸಿದ್ದೇವೆ. ಹಾವೇರಿಯಲ್ಲೂ ಪ್ರತಿ ತಾಲೂಕಿನಲ್ಲಿ 5ರಿಂದ 10 ಸಾವಿರ ಕೃಷಿ ಹೊಂಡ ನಿರ್ಮಿಸಲಾಗಿದೆ. ಇಂತಹ ಯೋಜನೆಯಲ್ಲಿ ಬದಲಾವಣೆ ತಂದು ಗ್ರಾಮೀಣ ಅಭಿವೃದ್ಧಿಗೆ ಮಾರಕವಾಗುವಂತೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.ಗಾಂಧೀಜಿ ಫೋಟೋ ಇಟ್ಟುಕೊಳ್ಳಬೇಡಿ:

ಮಹಾತ್ಮಾ ಗಾಂಧೀಜಿ ಅವರ ಹೆಸರಲ್ಲಿದ್ದ ನರೇಗಾ ಯೋಜನೆ ಹೆಸರು ಬದಲಿಸಿ ವಿಬಿ ಜಿ ರಾಮ್‌ ಜಿ ಎಂದು ಹೆಸರಿಡಲಾಗಿದೆ. ಹೀಗೆ ಗಾಂಧೀಜಿ ಅವರಿಗೆ ಅವಮಾನವಾಗುವಂತೆ ಮಾಡಿರುವ ಬಿಜೆಪಿ ನಾಯಕರು ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಫೋಟೋ ಇಟ್ಟುಕೊಳ್ಳುವಂತಿಲ್ಲ. ಇನ್ನು ಮುಂದೆ ಗಾಂಧೀಜಿ ಅವರ ಪ್ರತಿಮೆ ಮುಂದೆ ಕುಳಿತು ಪ್ರತಿಭಟಿಸುವ ಹಕ್ಕೂ ಇಲ್ಲದಂತಾಗಿದೆ. ನಿಮಗೆ ಗಾಂಧೀಜಿ ಬೇಡವಾಗಿದ್ದರೆ, ನಿಮ್ಮ ಬಳಿ ಇರುವ ಮಹಾತ್ಮ ಗಾಂಧೀಜಿ ಅವರ ಫೋಟೋಗಳನ್ನು ಮನೆಗೆ ಕೊಟ್ಟುಬಿಡಿ. ನಾವು ಗೌರವದಿಂದ ಅದನ್ನು ಇಟ್ಟುಕೊಳ್ಳುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರನ್ನು ಒಮ್ಮೆ ಕೊಲೆ ಮಾಡಿದ್ದಲ್ಲದೆ, ಈಗ ಮತ್ತೆ ಕೊಲೆ ಮಾಡುತ್ತಿದ್ದೀರಿ ಎಂದು ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಜಿ ರಾಮ್‌ ಜಿ ಬಗ್ಗೆ ಸರ್ಕಾರದಿಂದ ಸುಳ್ಳು ಮಾಹಿತಿ: ಬೊಮ್ಮಾಯಿಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳಿ ರಾಜ್ಯದ ಬಡವರ, ಕೂಲಿಕಾರರ ದಾರಿ ತಪ್ಪಿಸುತ್ತಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಸಲಾಗಿದೆ. ಈ 125 ದಿನಗಳನ್ನು ಗ್ರಾಪಂಗಳೇ ನಿರ್ಧಾರ ಮಾಡಬಹುದು. ಆದರೆ, ಈಗ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಕಾರ್ಮಿಕರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ರೈತರಿಗೆ ಅನುಕೂಲವಾಗಲು 60 ದಿನ ಕಾಲ ಕೃಷಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ವರ್ಷದಲ್ಲಿ 2 ಬಾರಿ ಉದ್ಯೋಗ ಖಾತ್ರಿ ಕೆಲಸಗಳನ್ನು ಕೃಷಿಗೋಸ್ಕರ ರಜೆ ನೀಡಲಾಗಿದೆ. ಇದನ್ನು ರಾಜ್ಯ ಸರ್ಕಾರ ಆಕ್ಷೇಪ ಮಾಡುವ ಮೂಲಕ ರೈತ ವಿರೋಧಿ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಇಡೀ ದೇಶದ ರೈತರಿಂದ ಬೇಡಿಕೆ ಅನುಗುಣವಾಗಿದೆ. ಅಲ್ಲದೆ, ಹೇಗಿದ್ದರೂ ವರ್ಷದಲ್ಲಿ 125 ದಿನ ಬಿಟ್ಟರೆ ಬೇರೆ ದಿನದಲ್ಲಿ ಬೇರೆ ರಂಗದಲ್ಲಿ ಕೆಲಸ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ‌.

ಭ್ರಷ್ಟಾಚಾರ ತಡೆ:ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ‌ ಒಳಗೆ ಕಡ್ಡಾಯವಾಗಿ ಕಾರ್ಮಿಕರಿಗೆ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದಿರುವ ವಿಚಾರ ಹೇಳಿ ಕಾರ್ಮಿಕರನ್ನು ಈ ಯೋಜನೆಯಿಂದ ದೂರ ಮಾಡುತ್ತಿದೆ. ನರೇಗಾ ಯೋಜನೆ ದುರ್ಬಳಕೆ, ಭ್ರಷ್ಟಾಚಾರ ತಪ್ಪಿಸಲು ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ. ಆದರೂ ಇದರಿಂದ ವಂಚನೆ ಆಗುತ್ತದೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ 60-40 ಅನುಪಾತದಲ್ಲಿ ಅನುದಾನ ಹಂಚಿಕೊಳ್ಳುವ ನಿರ್ಧಾರದಿಂದ ಹೆಚ್ಚು ದಿನ ಹೆಚ್ಚು ಜನರಿಗೆ ಉದ್ಯೋಗ ಕೊಡಲು ಮತ್ತು ರಾಜ್ಯ ಸರ್ಕಾರಗಳು ದುಂದು ವೆಚ್ಚ, ಅನುಪಯುಕ್ತ ವೆಚ್ಚ, ಭ್ರಷ್ಟಾಚಾರ ಕಡಿಮೆ ಮಾಡಿ ರೈತ ಕೂಲಿಕಾರರಿಗೆ ಸಹಾಯ ಮಾಡುವ ಚಿಂತನೆ ಮಾಡಬೇಕು. ಅದು ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿರುದ್ಯೋಗ ನಿವಾರಣೆ:

ವರ್ಷದಲ್ಲಿ 125 ದಿನ ಉದ್ಯೋಗ ಕೊಡುವುದರಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ಯೋಜನೆಯಲ್ಲಿದ್ದ ಭ್ರಷ್ಟಾಚಾರ ಸಂಪೂರ್ಣ ನಿವಾರಣೆ ಆಗುತ್ತದೆ. ಬಡವರು ಕಾರ್ಮಿಕರು ದೀನ, ದಲಿತರಿಗೆ ನ್ಯಾಯ ಸಮ್ಮತ ಕೆಲಸ ಮತ್ತು ಕೂಡಲೇ ವೇತನ ಸಿಗುವ ವ್ಯವಸ್ಥೆ ಆಗುತ್ತದೆ. ಪಂಚಾಯತಿಗಳು ಯೋಜನೆ ರೂಪಿಸುವ, ಅನುಷ್ಠಾನ ಮಾಡುವ ಸರ್ವ ಸ್ವಾತಂತ್ರ್ಯ ಹೊಂದುತ್ತವೆ‌. ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಅವು ಮುಕ್ತವಾಗುತ್ತವೆ ಎಂದು ಹೇಳಿದ್ದಾರೆ.