ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇತ್ತೀಚೆಗೆ ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ವಾಕೋ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತರಬೇತುದಾರ ಸೆನ್ಸಾಯ್ ಡಿ. ಚಂದ್ರು, ಅಂಬರೀಶ್ ನೇತೖತ್ವದ ತಂಡಕ್ಕೆ 1 ಚಿನ್ನ ಹಾಗೂ 8 ಕಂಚಿನ ಪದಕಗಳು ಸಂದಿದೆ.ದೆಹಲಿಯಲ್ಲಿ ಫೆ.4ರಿಂದ 4 ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಓರ್ವ ಮಹಿಳೆ ಮತ್ತು 4 ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿ 1 ಚಿನ್ನ ಹಾಗೂ 8 ಕಂಚಿನ ಪದಕಗಳನ್ನು ಗಳಿಸಿದ್ದು, ಮಾಸ್ಟರ್ ಕ್ಯಾಟಗರಿಯ ಕಿಕ್‌ಲೈಟ್ ವಿಭಾಗದಲ್ಲಿ ಕೊಳ್ಳೇಗಾಲ ಪಟ್ಟಣದ ಬಸ್ತಿಪುರ ಗ್ರಾಮದ ಪುಷ್ಪಲತಾ ಅವರು 41 ವರ್ಷದ ವಿಭಾಗದಲ್ಲಿ ವಿಜೇತರಾಗಿ 1 ಚಿನ್ನದ ಪದಕಗಳಿಸಿದ್ದಾರೆ. ಅದೇ ರೀತಿ ಇವರ ಪುತ್ರಿ ಜೀವಿತಾ (ಆದರ್ಶ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವೇಪನ್ಸ್ ಮತ್ತು ಓಪನ್ ಹ್ಯಾಂಡ್ 2 ವಿಭಾಗದಲ್ಲೂ 2 ಕಂಚಿನ ಪದಕಗಳಿಸಿದ್ದು ಈ ಸ್ಪರ್ಧೆಯಲ್ಲಿ ಅಮ್ಮ, ಮಗಳಿಬ್ಬರು ಸಾಧನೆಗೈದು ಪ್ರಶಂಸೆಗೆ ಭಾಜನರಾಗಿದ್ದಾರೆ. ಉಳಿದಂತೆ ಕೊಳ್ಳೇಗಾಲ ಪಟ್ಟಣದ ಕುಕ್ಕೆ ಹೋಟೆಲ್ ಸಹ ಮಾಲೀಕ ನಾಗರಾಜು ಅವರ ಪುತ್ರಿ ಹಾಗೂ ವಾಸವಿ ವಿದ್ಯಾಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಓಪನ್ ಹ್ಯಾಂಡ್, ವೆಪಾನ್ ಹಾಗೂ ಮ್ಯೂಸಿಕಲ್ ವೆಪಾನ್ ಫಾಮ್‌ನ 3 ವಿಭಾಗಗಳಲ್ಲೂ 3 ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.
ಅದೇ ರೀತಿಯಲ್ಲಿ ಕೊಳ್ಳೇಗಾಲ ವ್ಯಾಪ್ತಿಯ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿತ್ಯಶ್ರೀ (ಆದರ್ಶ ಸರ್ಕಾರಿ ಶಾಲೆ) ವಿದ್ಯಾರ್ಥಿನಿ ಲೈಟ್ ಕಾಂಟಾಕ್ಟ್ ಮತ್ತು ಓಪನ್ ಹ್ಯಾಂಡ್ ಫಾಮ್‌ನ 2 ವಿಭಾಗಗಳಲ್ಲೂ 2 ಕಂಚಿನ ಪದಕಗಳಿಸಿದ್ದಾರೆ. ಯಳಂದೂರು ಪಟ್ಟಣದ ಸ್ನೇಹಾ (7ನೇ ತರಗತಿ ಆದರ್ಶ ಶಾಲೆ ಮೆಲ್ಲಳ್ಳಿ) ಕಿಕ್ ಲೈಟ್ ವಿಭಾಗದಲ್ಲಿ 1 ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ. ಸಾಧಕರನ್ನು ತರಬೇತುದಾರರಾದ ಚಂದ್ರು.ಡಿ, ಅಂಬರೀಶ್ ಅಭಿನಂದಿಸಿದ್ದಾರೆ.ಪದಕ ಪಡೆದವರು
ಪುಷ್ಪಲತಾ (ಚಿನ್ನ), ಜೀವಿತಾ, (2 ಕಂಚು), ಸಾನ್ವಿ (3 ಕಂಚು), ನಿತ್ಯಶ್ರೀ (2 ಕಂಚು), ಸ್ನೇಹಾ (1 ಕಂಚು)