ದೆಹಲಿ ಭದ್ರತಾ ಪಡೆಯ ವಿಂಗ್ ಕಮಾಂಡರ್ ನಾಗೇಶ್, ಎ.ಪಿ.ಸಿಂಗ್, ರಾಘವ್ ಸೇರಿದಂತೆ ಹತ್ತಕ್ಕೂ ಹೆಚ್ಚು ಸೇನಾ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಮೂರು ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ಮಾಡುವುದರ ಕುರಿತು ಪ್ರಾಯೋಗಿಕ ಅಭ್ಯಾಸ ನಡೆಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ನಡೆಯಲಿರುವ ಸುತ್ತೂರು ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ ೧೦೬೬ನೇ ಜಯಂತ್ಯುತ್ಸವಕ್ಕೆ ಡಿ.೧೬ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸುವ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆಯ ಅಧಿಕಾರಿಗಳು ಮಾರೇಹಳ್ಳಿಯಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಸ್ಥಳಗಳನ್ನು ಪರಿಶೀಲಿಸಿ, ಹೆಲಿಕಾಪ್ಟರ್ ಹಾರಾಟ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಂದ ಹಲವು ಮಾಹಿತಿಗಳನ್ನು ಪಡೆದರು.ದೆಹಲಿ ಭದ್ರತಾ ಪಡೆಯ ವಿಂಗ್ ಕಮಾಂಡರ್ ನಾಗೇಶ್, ಎ.ಪಿ.ಸಿಂಗ್, ರಾಘವ್ ಸೇರಿದಂತೆ ಹತ್ತಕ್ಕೂ ಹೆಚ್ಚು ಸೇನಾ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಮೂರು ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ಮಾಡುವುದರ ಕುರಿತು ಪ್ರಾಯೋಗಿಕ ಅಭ್ಯಾಸ ನಡೆಸಿದರು.
ಮೂರು ಸೇನಾ ಹೆಲಿಕಾಪ್ಟರ್ ಹಲವು ಸುತ್ತುಗಳ ಹಾರಾಟ ನಡೆಸಿ ಪರೀಕ್ಷೆ ನಡೆಸಿದ್ದವು. ಮತ್ತೊಂದೆಡೆ ಹೆಲಿಪ್ಯಾಡ್ ಸುತ್ತಲಿನ ಸುಮಾರು ೫೦೦ ಮೀಟರ್ ವ್ಯಾಪ್ತಿಯನ್ನು ಭದ್ರತಾ ಸಿಬ್ಬಂದಿ ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಸೇನಾ ವಿಮಾನಗಳ ಹಾರಾಟವನ್ನು ನೂರಾರು ಮಂದಿ ಹೆಲಿಪ್ಯಾಡ್ ಸುತ್ತಲೂ ನಿಂತು ಕುತೂಹಲದಿಂದ ವೀಕ್ಷಿಸಿದರು.ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ, ತಿಮ್ಮಯ್ಯ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್‌ಪಿ ಎಸ್.ಬಿ.ಯಶವಂತ ಕುಮಾರ್ ಅವರೊಂದಿಗೆ ಸೇನಾ ಅಧಿಕಾರಿಗಳು ಚರ್ಚೆ ನಡೆಸಿ ಕೆಲ ಸೂಚನೆಗಳನ್ನು ನೀಡಿದರು.
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆಯ ಅಧಿಕಾರಿಗಳ ನಿರ್ದೇಶನದಂತೆ ಪಟ್ಟಣದಲ್ಲಿ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ವಾಹನ ಸಂಚರಿಸುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪುಟ್‌ಪಾತ್ ಅಂಗಡಿಗಳ ತೆರವು, ವಾಹನಗಳ ಸಂಚಾರ ನಿರ್ಬಂಧಕ್ಕೆ ಕ್ರಮ ವಹಿಸಲಾಗುತ್ತಿದೆ.