ವಿಶೇಷಚೇತನರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಿ

| Published : Jul 17 2024, 12:48 AM IST

ಸಾರಾಂಶ

ವಿಕಲಚೇತನರಿಗೆ ಯುಡಿಐಡಿ ಮನೆ ಬಾಗಿಲಿಗೆ ಸೌಲಭ್ಯವನ್ನು ಕಲ್ಪಿಸಬೇಕು. ವಿಕಲಚೇತನರಿಗೆ ಎಲ್ಲಾ ಇಲಾಖೆಗಳ, ಸ್ಥಳಿಯ ಸಂಸ್ಥೆಗಳ ಶೆ.5 ರಷ್ಟು ಅನುದಾನ ಮೀಸಲಾತಿ ಹಾಗೂ ವಿಶೇಷ ಸೌಲಭ್ಯ ಒದಗಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಕಲಚೇತನರು ಹಾಗೂ ಹಿರಿಯ ನಾಗರಿಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಮತ್ತು ಅವರಿಗೆ ಸಿಗುವ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೇ.5ರಷ್ಟು ಅನುದಾನ ಮೀಸಲು

ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು, ವಿಕಲಚೇತನರ ವಿದ್ಯಾರ್ಥಿವೇತನ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಆಧಾರ್ ಕಾರ್ಡ್ ನೀಡುವುದು, ವಿಕಲಚೇತನರಿಗೆ ಸೇವೆಗಳನ್ನು ಒದಗಿಸಲು ಸಂಚಾರಿ ವಾಹನವನ್ನು ಒದಗಿಸುವುದು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಮಂಡಳಿಯು ವಿಕಲಚೇತನರಿಗೆ ಯುಡಿಐಡಿ ಮನೆ ಬಾಗಿಲಿಗೆ ಸೌಲಭ್ಯವನ್ನು ಕಲ್ಪಿಸಬೇಕು. ವಿಕಲಚೇತನರಿಗೆ ಎಲ್ಲಾ ಇಲಾಖೆಗಳ, ಸ್ಥಳಿಯ ಸಂಸ್ಥೆಗಳ ಶೆ.5 ರಷ್ಟು ಅನುದಾನ ಮೀಸಲಾತಿ ಹಾಗೂ ವಿಶೇಷ ಸೌಲಭ್ಯ ಒದಗಿಸಬೇಕು ಎಂದರು.ಮನೆ ಬಾಗಿಲಿಗೆ ಸವಲತ್ತು ತಲುಪಿಸಿ

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹೋಬಳಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಗಳನ್ನು ವಿತರಿಸಬೇಕು. ಸರ್ಕಾರಿ ಸೌಲಭ್ಯಗಳನ್ನು ಪ್ರತಿ ತಿಂಗಳ 1 ಮತ್ತು 3ನೇ ಬುಧವಾರವು ವಿಕಲಚೇತನರ ಮನೆ ಬಾಗಿಲಿಗೆ ಸವಲತ್ತುಗಳನ್ನು ನೀಡಬೇಕು. ಅಪಘಾತಗಳಿಂದ ಅಂಗವಿಕಲತೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂಗವಿಕಲತೆ ನಿವಾರಣಾ ಚಟುವಟಿಕೆಗಳನ್ನು ಶಾಲಾ/ ಕಾಲೇಜು ಸಮುದಾಯಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಂಜುಳಾ ದೇವಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್, ವಿಶೇಷ ಚೇತನರ ಸಮುದಾಯದ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.