ಹಾಡಿಗಳಿಗೂ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸಿ

| Published : Apr 01 2025, 12:51 AM IST

ಸಾರಾಂಶ

ಜಿಲ್ಲೆಯ ಹಾಡಿಗಳಿಗೂ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಪಂಕಜ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಹಾಡಿಗಳಿಗೂ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷರಾದ ಪಂಕಜ ತಿಳಿಸಿದರು.

ನಗರದ ಜಿ.ಪಂ.ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹಾಡಿಗಳಲ್ಲಿಯೂ ಪದವಿ ಪೂರ್ಣಗೊಳಿಸಿರುವ ಯುವಕರಿದ್ದು, ಅವರಿಗೆ ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.

ಸದಸ್ಯರಾದ ಮಂದ್ರೀರ ಮೋಹನ್‌ದಾಸ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಫಲಾನುಭವಿಗಳಿಂದಲೇ ಅಭಿಪ್ರಾಯ ಸಂಗ್ರಹಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ ಅವರು ಮಾತನಾಡಿ, ತಾಲೂಕು ಮಟ್ಟದಲ್ಲಿಯೇ ಫಲಾನುಭವಿಗಳ ಯಶೋಗಾಥೆ ಸಂಗ್ರಹ ಕಾರ್ಯವಾಗಬೇಕು ಎಂದರು.

ಸಮಿತಿಯ ಉಪಾಧ್ಯಕ್ಷರಾದ ನಾಸೀರ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಅಕ್ಕಿ ವಿತರಿಸಬೇಕು. ಯಾವುದೇ ಕಾರಣಕ್ಕು ಹಣ ಪಡೆದು ಅಕ್ಕಿ ನೀಡಬಾರದು. ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ನಿಯಮಾನುಸಾರ ಬೋರ್ಡ್ ಇರಿಸುವಂತೆ ತಿಳಿಸಿದರು. ಸರ್ಕಾರದ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶ್ರಮ ವಹಿಸಬೇಕು ಎಂದರು.

ಕಾಳಿಮಾಡ ಪ್ರಶಾಂತ್ ಅವರು ಮಾತನಾಡಿ, ವಿರಾಜಪೇಟೆ ತಾಲೂಕಿನ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಕಜ ಅವರು ಮಾತನಾಡಿ, ಶಕ್ತಿ ಯೋಜನೆಯಡಿ ಹೆಚ್ಚಿನ ಬಸ್ ಗಳನ್ನು ಒದಗಿಸಬೇಕು ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಶಾರಿ ಗಿರೀಶ್, ಭೀಮಯ್ಯ ಕೆ.ಸಿ., ಸದಸ್ಯರಾದ ಕುಟ್ಟಂಡ ಕೃಷ್ಣ, ಬಿ.ಒ ಅಣ್ಣಯ್ಯ, ಕೆ.ಎಂ. ಬಸೀರ್, ಹರಿಪ್ರಸಾದ್, ಪಿ.ಎಲ್.ಸುರೇಶ್, ಧನ್ಯ, ಕೆ.ಜಿ.ಪೀಟರ್, ಕಾಂತರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ್ ಇತರರು ಹಾಜರಿದ್ದರು.