ಸಾರಾಂಶ
ಹಳಿಯಾಳ: ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಬಡವರಿಗೆ ಅರ್ಹರಿಗೆ ಸಹಾಯ ಮಾಡಿದರೆ ಖಂಡಿತ ಪ್ರತಿಫಲ ದೊರೆಯಲಿದೆ, ನಿಮ್ಮ ಸಂಕಷ್ಟದ ಸಮಯದಲ್ಲಿ ದೇವರು ನಿಮಗೆ ನೆರವಿಗೆ ಬರುತ್ತಾರೆ. ಈ ಮಾತನ್ನು ಶಾಸಕನಾಗಿ ನಿಮಗೆ ಹೇಳುತ್ತಿಲ್ಲ. ವಯಸ್ಸಿನಲ್ಲಿ ಹಿರಿಯನಾಗಿ ನಿಮಗೆ ನನ್ನ ಅನುಭವದ ಮಾತನ್ನು ಹೇಳುತ್ತಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಮಂಗಳವಾರ ಸಂಜೆ ತಾಲೂಕಾಡಳಿತ ಸೌಧದಲ್ಲಿ ನಡೆದ ಹಳಿಯಾಳ- ದಾಂಡೇಲಿ ತಾಲೂಕುಗಳ ಪ್ರಕೃತಿವಿಕೋಪ ಹಾನಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಪರಿಹಾರವನ್ನು ನೀಡುವಾಗ ಅಧಿಕಾರಿಗಳು ಆದಷ್ಟು ಉದಾರತೆಯನ್ನು ತೋರಬೇಕು. ಜನ ನಿಮ್ಮನ್ನು ನೆನೆಸುವ ಹಾಗೇ ಸೇವೆಯನ್ನು ಸಲ್ಲಿಸಿ ಎಂದರು. ಜನಸೇವೆ ಮಾಡುವ ಉತ್ತಮ ಅವಕಾಶ ಅಧಿಕಾರಿಗಳಿಗೆ, ಸಿಬ್ಬಂದಿಗೆ ದೊರೆತಿದೆ. ಹೀಗಿರುವಾಗ ಕಾಯಿದೆ, ಕಾನೂನು, ನಿಯಮಗಳನ್ನು ಹೇಳಿ ಸಂತ್ರಸ್ತರನ್ನು ಗೋಳಾಡಿಸಬೇಡಿ ಎಂದರು.ಯಾರಿಗೂ ಯಾರ ಭಯವಿಲ್ಲವಾಗಿದೆ. ಹೀಗಾದರೆ ಆಡಳಿತ ನಡೆಯದು. ಅತಿವೃಷ್ಟಿಯಿಂದಾದ ಬೆಳೆಹಾನಿ ಪರಿಹಾರ ಇನ್ನೂವರೆಗೂ ರೈತರಿಗೆ ದೊರೆಯಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಮಾತನಾಡಿ, ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಲ್ಲಿ ಸುರಿದ ಗಾಳಿಮಳೆಗೆ ಮೆಕ್ಕೆಜೋಳದ ಬೆಳೆ ನೆಲಕ್ಕೊರಗಿದೆ ಎಂದರು.ಹಳಿಯಾಳ ತಹಸೀಲ್ದಾರ್ ಅವರು, ಮಳೆಯಿಂದ ತಾಲೂಕಿನಲ್ಲಿ 134 ಮನೆಗಳು ಭಾಗಶಃ ಕುಸಿದಿದ್ದು, 90 ಮನೆಗಳಿಗೆ ಪರಿಹಾರ ನೀಡಲಾಗಿದೆ. 2 ಜಾನುವಾರುಗಳು ಸಾವಿಗೀಡಾಗಿವೆ. ಪರಿಹಾರವನ್ನು ನೀಡಲಾಗಿದೆ ಎಂದರು.
ದಾಂಡೇಲಿ ತಾಲೂಕಿನಲ್ಲಿ 27 ಮನೆ ಭಾಗಶಃ ಕುಸಿದಿದ್ದು, 15 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ದಾಂಡೇಲಿ ತಹಸೀಲ್ದಾರ್ ತಿಳಿಸಿದರು.ಹೆಸ್ಕಾಂ ಇಲಾಖೆಯ ಎಇಇ ರವೀಂದ್ರ ಮೆಟಗುಡ್ಡ ಮಾತನಾಡಿ, ಮಳೆಗೆ 168 ಕಂಬಗಳಗೆ ಹಾನಿಯಾಗಿದ್ದು, ಅದರಲ್ಲಿ 165 ಕಂಬಗಳನ್ನು ಹಾಗೂ 53 ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಲಾಗಿದೆ ಎಂದರು.
ಹಳಿಯಾಳ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ಹಳಿಯಾಳ ತಾಪಂ ಇಒ ಪರಶುರಾಮ ಘಸ್ತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಸುಪಾ ಜಲಾಶಯಕ್ಕೆ ಶಾಸಕ ದೇಶಪಾಂಡೆ ಬಾಗಿನಜೋಯಿಡಾ: ತಾಲೂಕಿನ ಗಣೇಶಗುಡಿಯಲ್ಲಿರುವ ಕಾಳಿ ನದಿಯ ಸುಪಾ ಜಲಾಶಯಕ್ಕೆ ಮಂಗಳವಾರ ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಬಾಗಿನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಸದ್ಯ ಜಲಾಶಯದ ನೀರಿನ ಮಟ್ಟ 558 ಮೀಟರ್ ದಾಟಿದೆ. ಗರಿಷ್ಠ ಮಿತಿ 564 ಮೀ. ಇದೆ. ಈ ಹಿಂದೆ ಕೂಡ ಕಾಳಿ ಜಲಾಶಯ ನಾಲ್ಕೈದು ಬಾರಿ ತುಂಬಿದೆ. ಇದರಿಂದ ವಿದ್ಯುತ್ ಉತ್ಪಾದನೆ ಆಗಿ ಉಚಿತ ವಿದ್ಯುತ್ ನೀಡಲು ಅನುಕೂಲವಾಗಿದೆ. ಸದ್ಯದಲ್ಲೇ ಜಲಾಶಯ ಪೂರ್ತಿಯಾಗಿ ತುಂಬುವ ಸಾಧ್ಯತೆ ಇದೆ ಎಂದರು.ಸುಪಾ ಜಲಾಶಯದ ಸುರಕ್ಷತೆ ಕುರಿತು ಅಭಿಯಂತರ ಕೃಷ್ಣ ಭಟ್ ಮಾಹಿತಿ ನೀಡಿ, ಸರ್ಕಾರದ ಆದೇಶದಂತೆ ತಜ್ಞರ ಸಮಿತಿ ಪರಿಶೀಲನೆ ನಡೆಸಿದೆ. ಮೂರು ಗೇಟ್‌ಗಳಲ್ಲೂ ಯಾವುದೇ ತೊಂದರೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರ ರಾಜಶೇಖರ ಅಭಿಯಂತರ ಶಿವಪ್ರಸಾದ್, ತಾಲೂಕಿನ ಅಧಿಕಾರಿಗಳು, ಕಾಂಗ್ರೆಸ್ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.